ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಹಾಗೂ ನೀರ್ಚಾಲು ಘಟಕಗಳ ನೇತೃತ್ವದಲ್ಲಿ ವಿವಿಧ ಬೇಡಿಕೆಗಳೊಂದಿಗೆ ಬದಿಯಡ್ಕ ಗ್ರಾಮಪಂಚಾಯಿತಿ ಮುಂಭಾಗ ಧರಣಿ ನಡೆಸಲಾಯಿತು. ವ್ಯಾಪಾರಿ ಸದಸ್ಯರು ಬುಧವಾರ ಬೆಳಗ್ಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಿದರು.
ವಿವಿಧ ಬೇಡಿಕೆಗಳು :
ಪ್ಲಾಸ್ಟಿಕ್ ನಿಷೇಧದ ಹೆಸರಲ್ಲಿ ವ್ಯಾಪಾರಿಗಳನ್ನು ಪೀಡಿಸುವ ಹಾಗೂ ಅತಿಯಾದ ದಂಡ ಪಾವತಿಸುವುದರ ವಿರುದ್ಧ, ವ್ಯಾಪಾರ ಸಂಸ್ಥೆಗೆ ಬರುವ ವ್ಯಾಪಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪಾರ್ಕಿಂಗ್ ಸುವ್ಯವಸ್ಥೆಗೊಳಿಸುವ ಸಲುವಾಗಿ, ಬಸ್ ನಿಲ್ದಾಣದ ಸಮೀಪ ರಸ್ತೆ ವಿಭಾಜಕದ ಮದ್ಯ ಭಾಗದಲ್ಲಿ ದ್ವಿಚಕ್ರ, ಹಾಗೂ ತ್ರಿಚಕ್ರ ವಾಹನಗಳಿಗೆ ರಸ್ತೆ ದಾಟುವ ಸಲುವಾಗಿ ಸೂಕ್ತ ವ್ಯವಸ್ಥೆ, ಅನಧಿಕೃತ ವ್ಯಾಪಾರವನ್ನು ತೆರವು ಗೊಳಿಸಬೇಕು, ಕುಂಬಳೆ ಭಾಗಕ್ಕೆ ಸಂಚರಿಸುವ ಬಸ್‍ಗಳಿಗೆ ಸರಿಯಾದ ನಿಲ್ದಾಣ ಗುರುತಿಸಿ ಸಾರ್ವಜನಿಕರಿಗೆ ತಂಗುದಾಣ ವ್ಯವಸ್ಥೆ ಮಾಡಬೇಕು, ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಹರಿದು ವ್ಯಾಪಾರಿಗಳಿಗೆ ಹಾಗೂ ರಸ್ತೆ ಸಂಚಾರಕ್ಕೆ ಉಂಟಾಗುವ ತೊಂದರೆ ಮತ್ತು ವಾರದ ಸಂತೆ ಶನಿವಾರವಲ್ಲದೆ ಇನ್ನಿತರ ದಿನಗಳಲ್ಲಿ ನಡೆಸಬಾರದು ಮೊದಲಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಯಿತು. ವ್ಯಾಪಾರಿಗಳ ಇನ್ನಿತರ ಅಹವಾಲುಗಳನ್ನು ಮಹಾಸಭೆಯಲ್ಲಿ ವ್ಯಾಪಾರಿಗಳಿಂದ ಸ್ವೀಕರಿಸಿ ಎಲ್ಲಾ ಮನವಿಯನ್ನು ಒಟ್ಟುಗೂಡಿಸಿ ಕಾಲ್ನಡಿಗೆ ಮೂಲಕ ಪಂಚಾಯತಿ ಕಛೇರಿಗೆ ಸಾಗಿ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.
ಬದಿಯಡ್ಕ ಘಟಕದ ಅಧ್ಯಕ್ಷ ಕುಂಜಾರು ಮುಹಮ್ಮದ್ ಹಾಜಿ ಮುಂದಾಳುತ್ವದಲ್ಲಿ ನೀರ್ಚಾಲು ಘಟಕ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ದಿನೇಶ್ ಕಾಸರಗೋಡು ಉದ್ಘಾಟಿಸಿ ಮಾತನಾಡಿದರು. ಪ್ರಮುಖರಾದ ಎಸ್.ಎನ್.ಮಯ್ಯ, ಜ್ಞಾನದೇವ ಶೆಣೈ, ರಾಜು ಸ್ಟೀಫನ್, ರವಿ ನವಶಕ್ತಿ, ವನಿತಾ ವಿಂಗ್ ಅಧ್ಯಕ್ಷೆ ಪೂರ್ಣಿಮಾ ಕಾಮತ್, ಯೂತ್‍ವಿಂಗ್ ಅಧ್ಯಕ್ಷ ಮುಹಮ್ಮದ್ ರಫೀಕ್, ಉದಯಶಂಕರ, ಬದಿಯಡ್ಕ ಹಾಗೂ ನೀರ್ಚಾಲು ಘಟಕದ ವ್ಯಾಪಾರಿ ಸದಸ್ಯರು ಪಾಲ್ಗೊಂಡಿದ್ದರು.