ನವದೆಹಲಿ: 2020ನೇ ಶೈಕ್ಷಣಿಕ ಸಾಲಿನ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ನಿರ್ಗಮನ ಪರೀಕ್ಷೆ (ನೆಕ್ಸ್ಟ್) ನಡೆಸುವುದಕ್ಕೆ ಸಂಬಂಧಿಸಿದಂತೆ ಪರಾಮರ್ಶೆ ನಡೆಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಏಳು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿದೆ.
ನವದೆಹಲಿ: 2020ನೇ ಶೈಕ್ಷಣಿಕ ಸಾಲಿನ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ನಿರ್ಗಮನ ಪರೀಕ್ಷೆ (ನೆಕ್ಸ್ಟ್) ನಡೆಸುವುದಕ್ಕೆ ಸಂಬಂಧಿಸಿದಂತೆ ಪರಾಮರ್ಶೆ ನಡೆಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಏಳು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಕಾಯ್ದೆ ಅನ್ವಯ ಅಂತಿಮ ವರ್ಷದ ವಿದ್ಯಾರ್ಥಿಗಳು ನೆಕ್ಸ್ಟ್ ಪರೀಕ್ಷೆ ಬರೆಯುವುದು ಕಡ್ಡಾಯ. ಆದರೆ, ಜುಲೈ 13ರಂದು 2019ನೇ ಸಾಲಿನ ವಿದ್ಯಾರ್ಥಿಗಳಿಗೆ ನಡೆಸಬೇಕಿದ್ದ ಪರೀಕ್ಷೆಯನ್ನು ಆಯೋಗವು ಮುಂದೂಡಿತ್ತು.
ಈಗ 2020ನೇ ಸಾಲಿನ ವಿದ್ಯಾರ್ಥಿಗಳಿಗೆ ನೆಕ್ಸ್ಟ್ ನಡೆಸುವುದು ಸೇರಿದಂತೆ ಇದಕ್ಕೆ ಪೂರಕವಾಗಿ ರಾಜ್ಯಗಳು ಮತ್ತು ವೈದ್ಯಕೀಯ ಕಾಲೇಜುಗಳ ಸಿದ್ಧತೆ ಬಗ್ಗೆ ಸಮಿತಿಯು ಪರಿಶೀಲನೆ ನಡೆಸಿ, ಎರಡು ವಾರದೊಳಗೆ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ.
ಹಾಲಿ ಇರುವ ಪರೀಕ್ಷೆಗೆ ಬದಲಾಗಿ ನೆಕ್ಟ್ಸ್‌ಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿರುವ ಹೊಸ ನಿಯಮಗಳ ಬದಲಾವಣೆ ಬಗ್ಗೆಯೂ ಪರಿಶೀಲನೆ ನಡೆಸಲಿದೆ.
ನೆಕ್ಸ್ಟ್‌ಗೆ ಸಲ್ಲಿಸುವ ಅರ್ಜಿಗಳು ಸೇರಿದಂತೆ ಸ್ನಾತಕೋತ್ತರ ಪ್ರವೇಶಾತಿ ಮತ್ತು ವೈದ್ಯಕೀಯ ವೃತ್ತಿ ಆರಂಭಿಸಲು ಅಗತ್ಯವಿರುವ ಪರವಾನಗಿ ಪರೀಕ್ಷೆ ಬಗ್ಗೆಯೂ ಪರಿಶೀಲಿಸಲಿದೆ. ಈ ಪರೀಕ್ಷೆಗೆ ಸಲ್ಲಿಸುವ ಅರ್ಜಿಗಳಿಗೆ ಮಿತಿ ವಿಧಿಸುವ ಕುರಿತು ಪರಾಮರ್ಶಿಸಲಿದೆ. ಅಲ್ಲದೇ, ಪರೀಕ್ಷೆ ನಡೆಸಲು ರಾಜ್ಯಗಳು, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳು ಆಯೋಗದ ಮಾರ್ಗಸೂಚಿಗೆ ಅನುಗುಣವಾಗಿ ಸನ್ನದ್ಧವಾಗಿವೆಯೇ ಎಂಬುದನ್ನು ಅವಲೋಕಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಯೋಗವು ನೆಕ್ಸ್ಟ್‌ಗೆ ಸಂಬಂಧಿಸಿದಂತೆ ಪ್ರಕಟಿಸಿರುವ ನಿಯಮಾವಳಿಗಳ ಅನ್ವಯ, ವಾರ್ಷಿಕವಾಗಿ ಎರಡು ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಅಲ್ಲದೇ, ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಮತ್ತು ವೃತ್ತಿ ಆರಂಭ ಪರವಾನಗಿ ಪಡೆಯಲು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುವುದು ಕಡ್ಡಾಯ ಎಂದು ತಿಳಿಸಿದೆ.