ನವದೆಹಲಿ: ಶಬರಿಮಲೆಯಲ್ಲಿ ಅನ್ನದಾನಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿ ಹೊರತು ಪಡಿಸಿ ಬೇರೆ ಯಾರಿಗೂ ಅನುಮತಿ ನೀಡುವಂತಿಲ್ಲ ಎಂಬ ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಬೇಲಾ ಎಂ. ತ್ರಿವೇದಿ ಮತ್ತು ಇತರರನ್ನು ಒಳಗೊಂಡ ಪೀಠವು ಅರ್ಜಿಗಳನ್ನು ವಜಾಗೊಳಿಸಿದೆ. ಶಬರಿಮಲೆಯಲ್ಲಿ ಅನ್ನದಾನದಂತಹ ವಿಷಯಗಳನ್ನು ಪರಿಗಣಿಸಲು ಆಧ್ಯಾತ್ಮಿಕ ಅಧಿಕಾರದ ವ್ಯಾಪ್ತಿಯನ್ನು ಚಲಾಯಿಸುವುದಿಲ್ಲ ಎಂದು ಗಮನಿಸಿ ಸುಪ್ರೀಂ ಕೋರ್ಟ್ ಅರ್ಜಿಗಳನ್ನು ವಜಾಗೊಳಿಸಿದೆ.
ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ವಿವಿಧ ಬಣಗಳು ಅನ್ನದಾನಕ್ಕೆ ಅನುಮತಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಡಿ. ವಿಜಯಕುಮಾರ್ ಪ್ರಧಾನ ಕಾರ್ಯದರ್ಶಿ ಮತ್ತು ಕೋಯಂ ಜನಾರ್ದನನ್ ಪ್ರಧಾನ ಕಾರ್ಯದರ್ಶಿ ಇವರುಗಳು ಪ್ರಮುಖವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.
ಶಬರಿಮಲೆ ಮತ್ತು ಪಂಪಾದಲ್ಲಿ ಅನ್ನದಾನಕ್ಕೆ ಅನುಮತಿ ನೀಡುವಂತೆ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿತ್ತು. 2017ರಲ್ಲಿ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘಕ್ಕೆ ನೀಡಿದ್ದ ಅನುಮತಿಯನ್ನೂ ಹೈಕೋರ್ಟ್ ರದ್ದುಗೊಳಿಸಿತ್ತು. ಈ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಪ್ರಧಾನ ಕಾರ್ಯದರ್ಶಿ ಕೋಯಂ ಜನಾರ್ದನನ್ ಪರ ಹಿರಿಯ ವಕೀಲ ವಿ. ಚಿದಂಬರೇಶ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಡಿ.ವಿಜಯಕುಮಾರ್ ಪರ ಹಿರಿಯ ವಕೀಲ ಕೆ. ರಾಧಾಕೃಷ್ಣನ್ ಉಪಸ್ಥಿತರಿದ್ದರು.