ಮಸ್ಕತ್ : ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಗುರುವಾರ(ಅ.19) ಮಸ್ಕತ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಭಾರತ ಮತ್ತು ಒಮಾನ್ ನಡುವಿನ ಶಾಶ್ವತ ಸ್ನೇಹಕ್ಕಾಗಿ ಅವರು ಪ್ರಾರ್ಥನೆ ಸಲ್ಲಿಸಿದರು.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು "ಮೋತೀಶ್ವರ ಮಹಾದೇವ ಎಂದು ಕರೆಯಲ್ಪಡುವ ಮಸ್ಕತ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದೇನೆ.
ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುರಳೀಧರನ್ ಅವರು ಅ.18-19 ರಂದು ಒಮಾನ್ ಸುಲ್ತಾನೇಟ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ( MEA ) ತಿಳಿಸಿತ್ತು.
ಓಮನ್‌ನಲ್ಲಿರುವ ಭಾರತೀಯ ಸಮುದಾಯದ ಇತಿಹಾಸ, ಭಾರತ ಮತ್ತು ಒಮಾನ್ ನಡುವಿನ ಸಂಬಂಧಗಳಿಗೆ ಅದರ ಕೊಡುಗೆಯ ಮೇಲೆ ಬೆಳಕು ಚೆಲ್ಲುವ ಉಪನ್ಯಾಸ ಸರಣಿಯನ್ನು ಭಾರತೀಯ ರಾಯಭಾರ ಕಚೇರಿ ಆಯೋಜಿಸುತ್ತಿದೆ. ಈ ಉಪನ್ಯಾಸ ಸರಣಿಯನ್ನು ಅವರು ಉದ್ಘಾಟಿಸಲಿದ್ದಾರೆ.
ಭೇಟಿಯ ಸಮಯದಲ್ಲಿ, ಅವರು ಒಮಾನ್ ಸುಲ್ತಾನ ಮತ್ತು ಗಣ್ಯರೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಲಿದ್ದಾರೆ. ಬಳಿಕ ಒಮಾನ್‌ನ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ಸಂಗ್ರಹದಿಂದ ವಿಶೇಷವಾಗಿ ಸಂಗ್ರಹಿಸಲಾದ 20 ಕಲಾಕೃತಿಗಳ ಸಂಗ್ರಹವಾಗಿರುವ "ಇಂಡಿಯಾ ಆನ್ ಕ್ಯಾನ್ವಾಸ್: ಮಾಸ್ಟರ್‌ಪೀಸ್ ಆಫ್ ಮಾಡರ್ನ್ ಇಂಡಿಯನ್ ಪೇಂಟಿಂಗ್" ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಬಳಿಕ ಮುರಳೀಧರನ್, ವೃತ್ತಿಪರರು, ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಭಾರತೀಯ ಸಮುದಾಯ ಸಂಸ್ಥೆಗಳು ಮತ್ತು ಒಮಾನ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.
ಸೆಪ್ಟೆಂಬರ್‌ನಲ್ಲಿ, ಓಮನ್ ಉಪಪ್ರಧಾನಿ ಅಸಾದ್ ಬಿನ್ ತಾರಿಕ್ ಬಿನ್ ತೈಮೂರ್ ಅಲ್ ಸೈದ್ ಅವರು ನವದೆಹಲಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿದ್ದರು.