ಕಾಸರಗೋಡು: ಸರ್ಕಾರದ ಧೋರಣೆಯಿಂದ ಕೇರಳದ ಜನತೆಯ ಜೀವಾಳವಾಗಿರುವ ಖಾಸಗಿ ಬಸ್ ವಲಯ ದಿನಕಳೆದಂತೆ ಸಂಕಷ್ಟದತ್ತ ಸಾಗುತ್ತಿದೆ. ತಲೆಬುಡವಿಲ್ಲದ ತೆರಿಗೆ ಹೇರಿಕೆ, ದಿನಕ್ಕೊಂದು ಕಾನೂನು ಹೇರಿಕೆ, ವಿದ್ಯಾರ್ಥಿ ರಿಯಾಯಿತಿ ದರ ಏರಿಕೆ ವಿಚಾರದಲ್ಲಿ ಸರ್ಕಾರದ ಇಬ್ಬಗೆ ಧೋರಣೆ, ಕೆಎಸ್ಸಾರ್ಟಿಸಿ ಬಸ್‍ಗಳಿಗಿಲ್ಲದ ಮಾನದಂಡ ಖಾಸಗಿ ಬಸ್‍ಗಳ ಮೇಲೆ ಬಲವಾಗಿ ಹೇರುವಿಕೆ, ಜಿಪಿಎಸ್ ಅಳವಡಿಕೆ ವಿಷಯದಲ್ಲಿ ಖಾಸಗಿ ಬಸ್ ಮಾಲಿಕರ ಜೀವ ಹಿಂಡುತ್ತಿರುವ ಸರ್ಕಾರ, ಹೆಚ್ಚುತ್ತಿರುವ ವಿಮಾ ಮೊತ್ತ ಇವೆಲ್ಲವೂ ಕೇರಳದ ಖಾಸಗಿ ಬಸ್ ಉದ್ದಿಮೆಯನ್ನು ಅವನತಿಯ ಹಂತಕ್ಕೆ ತಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಸಂಚಾರ ಸೌಕರ್ಯ, ಎಲ್ಲೆಂದರಲ್ಲಿ ನಿಲುಗಡೆಯಿಂದ ಪ್ರಯಾಣಿಕರಿಗೆ ಸಮಸ್ಯೆಯಿಲ್ಲದ ಸೇವೆ ನೀಡುವುದು ಸೇರಿದಂತೆ ಖಾಸಗಿ ಬಸ್‍ಗಳು ಮಾದರಿ ಸೇವೆಗಳಿಗೆ ಸರ್ಕಾರ ಎಳ್ಳುನೀರು ಬಿಡಲು ಮುಂದಾದಂತಿದೆ.
ಈಗಾಗಲೇ ಅಂತಾರಾಜ್ಯ ಸಂಚಾರದ ಕಾಸರಗೋಡು-ಮಂಗಳೂರು ರೂಟಲ್ಲಿ ಖಾಸಗಿ ಬಸ್‍ಗಳ ಸಂಚಾರ ಬಹುತೇಕ ಕೊನೆಗೊಂಡಿದ್ದು, ಇಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳ ಸೇವೆಯೂ ಅಷ್ಟಕ್ಕಷ್ಟೆ. ಈ ರೂಟಲ್ಲಿ ಕರ್ನಾಟಕ ರಸ್ತೆಸಾರಿಗೆ ಬಸ್‍ಗಳ ಓಡಾಟದಿಂದ ಪ್ರಯಾಣಿಕರು ಹೆಚ್ಚು ಸಮಸ್ಯೆಗಳಿಲ್ಲದೆ ಪ್ರಯಾಣ ನಡೆಸುವಂತಾಗಿದೆ.
ಕೇರಳ ರಸ್ತೆ ಸಾರಿಗೆ ನಿಗಮದ ಬಹುತೇಕ ಬಸ್‍ಗಳು ಹಳೇಯದಾಗಿದ್ದು, ಸುರಕ್ಷಿತ ಪ್ರಯಾಣದ ಖಾತ್ರಿಯೂ ಅಷ್ಟಕ್ಕಷ್ಟೆ. ಒಂದೆಡೆ ಖಾಸಗಿ ಬಸ್ ವಲಯವನ್ನು ದಮನಿಸುತ್ತಿರುವ ಸರ್ಕಾರ, ಕೆಎಸ್ಸಾರ್ಟಿಸಿಯ ಅಭಿವೃದ್ಧಿಗೂ ಗಮನ ಹರಿಸದೆ, ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇನ್ನು ವಿದ್ಯಾರ್ಥಿ ರಿಯಾಯಿತಿ ಪಾಸ್ ವಿಚಾರದಲ್ಲೂ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ವಿದ್ಯಾರ್ಥಿ ರಿಯಾಯಿತಿ ಪಾಸ್ ಮಾನದಂಡವನ್ನು ಖಾಸಗಿ ಬಸ್‍ಗಳಿಗೆ ಮಾತ್ರ ಅಳವಡಿಸುತ್ತಿದೆ. ವಿದ್ಯಾರ್ಥಿ ರಿಯಾಯಿತಿ ಪಾಸ್ ನೀಡುವ ವಿಚಾರದಲ್ಲೂ ಸರ್ಕಾರ ಸ್ಪಷ್ಟ ಮಾನದಂಡ ರೂಪಿಸುತ್ತಿಲ್ಲ. ಐವತ್ತರ ಹರೆಯದ ಮೇಲ್ಪಟ್ಟವರನ್ನೂ ವಿದ್ಯಾರ್ಥಿಗಳೆಂದು ಪರಿಗಣಿಸಿ ರಿಯಾಯಿತಿ ಪಾಸ್ ನೀಡನೇಕಾದ ಅನಿವಾರ್ಯತೆ ಖಾಸಗಿ ಬಸ್ ವಲಯಕ್ಕಿರುವುದಾಗಿ ಬಸ್ ಮಾಲಿಕರು ಅಳಲತ್ತುಕೊಳ್ಳುತ್ತಿದ್ದಾರೆ.
ನಾಳೆ ರಾಜ್ಯವ್ಯಾಪಿ ಮುಷ್ಕರ:
ಖಾಸಗಿ ಬಸ್ ವಲಯವನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಅ. 31ರಂದು ಕೇರಳದಲ್ಲಿ ರಾಜ್ಯ ವ್ಯಾಪಿಯಾಗಿ ಖಾಸಗಿ ಬಸ್ ಮುಷ್ಕರ ಹೂಡಲಾಗುವುದು ಎಂದು ಖಾಸಗಿ ಬಸ್ ಮಾಲಿಕರ ಸಂಘಟನೆ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ಜೂ.5ರಂದು ಫೆಡರೇಶನ್ ರಾಜ್ಯ ಸಮಿತಿ ಅಧ್ಯಕ್ಷ ಕೆ.ಕೆ. ಥಾಮಸ್ ನಡೆಸಿರುವ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೊಳಿಸದೆ ಏಕಪಕ್ಷೀಯವಾಗಿ ಬಡವರಿಗೆ ಖಾಸಗಿ ಬಸ್‍ಗಳಲ್ಲಿ ಉಚಿತ ಸಾರಿಗೆ ಘೋಷಣೆ ಮಾಡಿರುವ ಸಾರಿಗೆ ಸಚಿವರ ಕ್ರಮ ಖಂಡನೀಯ. ಜಂಟಿ ಸಮಿತಿ ಸಲ್ಲಿಸಿರುವ ಬೇಡಿಕೆಗಳಿಗೆ ಅವಕಾಶ ನೀಡದಿದ್ದರೆ ನ.21ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿವರೆಗೆ ಸೇವೆ ಸ್ಥಗಿತಗೊಳಿಸಲಾಗುವುದು. ವಿದ್ಯಾರ್ಥಿಗಳ ಪ್ರಯಾಣ ದರವನ್ನು ಹೆಚ್ಚಿಸಬೇಕು, ಬಸ್‍ಗಳಲ್ಲಿ ಕ್ಯಾಮೆರಾ ಮತ್ತು ಸೀಟ್‍ಬೆಲ್ಟ್ ಅಳವಡಿಕೆಯನ್ನು ಕೈಬಿಡಬೇಕು, 140 ಕಿ.ಮೀ. ದೂರದ ಮಿತಿಯನ್ನು ಪರಿಗಣಿಸದೆ ಅಸ್ತಿತ್ವದಲ್ಲಿರುವ ಎಲ್ಲಾ ಬಸ್‍ಗಳ ಪರವಾನಿಗೆಯನ್ನು ನವೀಕರಿಸಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳೊಂದಿಗೆ ಮುಷ್ಕರ ನಡೆಯಲಿರುವುದಾಗಿ ತಿಳಿಸಿದ್ದಾರೆ.