ಜಮ್ಮು: ಪಾಕಿಸ್ತಾನದ ಪಡೆಗಳು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಗ್ರಾಮಗಳು ಮತ್ತು ಠಾಣೆಗಳನ್ನು ಗುರಿಯಾಗಿಸಿ ಅಪ್ರಚೋದಿತವಾಗಿ ಮೋರ್ಟರ್ ಶೆಲ್ ಮತ್ತು ಗುಂಡಿನ ದಾಳಿ ನಡೆಸಿರುವುದನ್ನು ಖಂಡಿಸಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪ್ರತಿಭಟನೆ ದಾಖಲಿಸಿದೆ.
ಜಮ್ಮು: ಪಾಕಿಸ್ತಾನದ ಪಡೆಗಳು ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಗ್ರಾಮಗಳು ಮತ್ತು ಠಾಣೆಗಳನ್ನು ಗುರಿಯಾಗಿಸಿ ಅಪ್ರಚೋದಿತವಾಗಿ ಮೋರ್ಟರ್ ಶೆಲ್ ಮತ್ತು ಗುಂಡಿನ ದಾಳಿ ನಡೆಸಿರುವುದನ್ನು ಖಂಡಿಸಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಪ್ರತಿಭಟನೆ ದಾಖಲಿಸಿದೆ.
ಸುಚೇತ್‌ಗಢದ ಗಡಿ ಠಾಣೆಯಲ್ಲಿ ನಡೆದ ಕಮಾಂಡರ್ ಮಟ್ಟದ ಸಭೆಯಲ್ಲಿ ಪಾಕಿಸ್ತಾನದ ರೇಂಜರ್‌ಗಳ ಮುಂದೆ ಬಿಎಸ್‌ಎಫ್ ಪ್ರತಿಭಟನೆ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ರೇಂಜರ್‌ಗಳು ನಡೆಸಿರುವ ಶೆಲ್ ದಾಳಿಯು 2021ರ ಅನಂತರ ನಡೆದ ಪ್ರಮುಖ ಕದನವಿರಾಮ ಉಲ್ಲಂಘನೆಯಾಗಿದೆ ಎಂದಿವೆ.
ಗುರುವಾರ ರಾತ್ರಿಯಿಂದ ಸುಮಾರು ಏಳು ಗಂಟೆಗಳ ಕಾಲ ಪಾಕಿಸ್ತಾನದ ಕಡೆಯಿಂದ ಶೆಲ್ ಮತ್ತು ಗುಂಡಿನ ದಾಳಿ ನಡೆದಿದೆ ಎಂದು ತಿಳಿಸಿವೆ.
ಆರ್.ಎಸ್. ಪುರ ವಲಯದ ಅರ್ನಿಯಾ ಪ್ರದೇಶದಲ್ಲಿ ಫಾಕಿಸ್ತಾನದ ಪಡೆಗಳ ಗುಂಡಿನ ದಾಳಿಗೆ ಬಿಎಸ್‌ಎಫ್ ಯೋಧರಾದ ಕರ್ನಾಟಕದ ಬಸವರಾಜ್ ಎಸ್.ಆರ್. ಮತ್ತು ಶೇರ್ ಸಿಂಗ್ ಹಾಗೂ ರಜನಿ ದೇವಿ ಎಂಬವರು ಗಾಯಗೊಂಡಿದ್ದರು.
'ಮಕ್ಕಳಿಗೆ ಊಟ ಮಾಡಿಸುತ್ತಿದ್ದಾಗ ಶೆಲ್ ಸ್ಫೋಟಗೊಂಡಿದೆ. ನನಗೆ ಗಾಯಗಳಾಗಿವೆ. ಮಕ್ಕಳು ಸುರಕ್ಷಿತರಾಗಿದ್ದಾರೆ' ಎಂದು ರಜನಿ ದೇವಿ ತಿಳಿಸಿದ್ದಾರೆ.
ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆದ ಕಾರಣ ಅರ್ನಿಯಾ, ಟ್ರೆವಾ, ಸುಚೇತ್‌ಗಢ ಮತ್ತು ಜಬೋವಾಲ್ ಗ್ರಾಮಗಳ ಜನರು ಹಾಗೂ ಅಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಕೆಲವು ಕುಟುಂಬಗಳು ಗಡಿ ಬಳಿಯ ಬಂಕರ್, ದೇಗುಲ ಹಾಗೂ ಇತರೆಡೆ ಆಶ್ರಯ ಪಡೆದಿದ್ದವು.
ಕಳೆದೆರಡು ವರ್ಷಗಳಿಂದ ಈ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು. ಇದೀಗ ಪಾಕಿಸ್ತಾನದ ಪಡೆಗಳು ಇದ್ದಕ್ಕಿದ್ದಂತೆ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗುಂಡಿನ ದಾಳಿಯ ಕಾರಣ ಜನರು ವಾಸಸ್ಥಳಗಳನ್ನು ತೊರೆದು ಬೇರೆಡೆಗೆ ತೆರಳುತ್ತಿರುವ ದೃಶ್ಯವಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಭಾರತ ಮತ್ತು ಪಾಕಿಸ್ತಾನ 2021 ಫೆಬ್ರುವರಿ 25ರಂದು ಕದನವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು.