ಕೊಚ್ಚಿ: ಅತ್ಯಾಚಾರ ಪ್ರಕರಣವನ್ನು ಮುಕ್ತಾಯಗೊಳಿಸಿ ಸಿಬಿಐ ಸಲ್ಲಿಸಿದ್ದ ವರದಿಯನ್ನು ಸ್ವೀಕರಿಸಿದ್ದ ಮ್ಯಾಜಿಸ್ಟ್ರೀಯಲ್ ಕೋರ್ಟ್‌ನ ನಿರ್ಧಾರವನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿ, ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಅವರಿಗೆ ಕೇರಳ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
'ಅತ್ಯಾಚಾರ ಪ್ರಕರಣದಲ್ಲಿ ವೇಣುಗೋಪಾಲ್ ಅವರನ್ನು ಆರೋಪಮುಕ್ತಗೊಳಿಸಿದ್ದ ಸಿಬಿಐ, ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ವರದಿ ಸಲ್ಲಿಸಿತ್ತು. ಇದಕ್ಕೆ ನಾನು ಸಲ್ಲಿಸಿದ್ದ ಆಕ್ಷೇಪವನ್ನು ಕಡೆಗಣಿಸಿದ್ದ ತಿರುವನಂತಪುರದ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್, ವರದಿಯನ್ನು ಸ್ವೀಕರಿಸಿದೆ' ಎಂದು ಸಂತ್ರಸ್ತೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ನೋಟಿಸ್ ಜಾರಿ ಮಾಡಿದೆ.
'ನನ್ನ ಆರೋಪಗಳನ್ನು ದೃಢಪಡಿಸುವ ಅಂಶಗಳು ಸಿಬಿಐ ತನಿಖೆಯ ಭಾಗವಾಗಿದ್ದವು. ಅಲ್ಲದೇ, ಸಿಬಿಐ ತನಿಖೆಯಲ್ಲಿ ಕಂಡುಬಂದ ನ್ಯೂನತೆಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ವಿವರಿಸಿದ್ದೆ' ಎಂದು ಅವರು ಮರುಪರಿಶೀಲನಾ ಮೇಲ್ಮನವಿಯಲ್ಲಿ ಹೇಳಿದ್ದಾರೆ.
ಈ ಅತ್ಯಾಚಾರ ಪ್ರಕರಣದಲ್ಲಿ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಸೇರಿದಂತೆ 6 ಜನರನ್ನು ಸಿಬಿಐ ಆರೋಪ ಮುಕ್ತರನ್ನಾಗಿಸಿತ್ತು.
ಇದೇ ಸಂತ್ರಸ್ತೆ ದಾಖಲಿಸಿದ್ದ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ಮುಖಂಡ ಎ.ಪಿ.ಅಬ್ದುಲ್ಲಕುಟ್ಟಿ ಅವರನ್ನೂ ಸಿಬಿಐ ಖುಲಾಸೆಗೊಳಿಸಿತ್ತು.