ನವದೆಹಲಿ: ಹಣದ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿರುವವರಿಗೆ ಸೇರಿದ ಸ್ವತ್ತುಗಳನ್ನು ಜಪ್ತಿ ಮಾಡಿ, ಅವರನ್ನು ಬಂಧಿಸಲು ಜಾರಿ ನಿರ್ದೇಶನಾಲಯ (ಇ.ಡಿ) ಹೊಂದಿರುವ ಅಧಿಕಾರವನ್ನು ಎತ್ತಿ ಹಿಡಿದು ಕಳೆದ ವರ್ಷ ತಾನು ನೀಡಿದ್ದ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆಯೇ ಎಂಬುದನ್ನು ಪರಾಮರ್ಶಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಜಾರಿ ನಿರ್ದೇಶನಾಲಯ ಹೊಂದಿರುವ ಅಧಿಕಾರಕ್ಕೆ ಸಂಬಂಧಿಸಿದ ಕೆಲ ಅಂಶಗಳ ಕುರಿತು ಮೂವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ ಕಳೆದ ವರ್ಷ ಜುಲೈ 27ರಂದು ನೀಡಿದ್ದ ತೀರ್ಪಿನ ಮರುಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ವಿಶೇಷ ನ್ಯಾಯಪೀಠ ಈ ಮಾತು ಹೇಳಿದೆ.
'ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಗೆ (ಪಿಎಂಎಲ್‌ಎ) ಸಂಬಂಧಿಸಿದ ವಿಚಾರಗಳನ್ನು ಮೂವರು ನ್ಯಾಯಮೂರ್ತಿಗಳದ್ದ ನ್ಯಾಯಪೀಠ ಈಗಾಗಲೇ ಪರಾಮರ್ಶಿಸಿದೆ. ಹೀಗಾಗಿ, ಈಗ ತೀರ್ಪಿನ ಮರುಪರಿಶೀಲನೆ ಸೀಮಿತವಾಗಿರಲಿದೆ' ಎಂದು ನ್ಯಾಯಮೂರ್ತಿ ಸಂಜಯಕಿಶನ್ ಕೌಲ್ ಅವರಿದ್ದ ವಿಶೇಷ ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಬೇಲಾ ಎಂ.ತ್ರಿವೇದಿ ಅವರೂ ಈ ಪೀಠದಲ್ಲಿದ್ದಾರೆ.
ವಿಚಾರಣೆ ವೇಳೆ, 'ತೀರ್ಪಿನ ಮರುಪರಿಶೀಲನೆಗೆ ನನ್ನ ಸಹಮತ ಇಲ್ಲ' ಎಂದು ಹೇಳಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಇದು ಕಾನೂನು ಪ್ರಕ್ರಿಯೆಯ ಅವಹೇಳನ ಮತ್ತು ದುರುಪಯೋಗವಾಗುತ್ತದೆ' ಎಂದು ಪೀಠಕ್ಕೆ ತಿಳಿಸಿದರು.
'ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸುವ ಅರ್ಜಿಯಲ್ಲಿ ಏನಾದರೂ ತಿರುಳಿದ್ದಲ್ಲಿ ಮಾತ್ರ, ಆ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು. ಇಲ್ಲದೇ ಹೋದಲ್ಲಿ ಇದೊಂದು ನಿಷ್ಫಲ ಚರ್ಚೆಯಾಗುತ್ತದೆ. ಮೂವರು ಸದಸ್ಯರಿದ್ದ ಪೀಠವು ಇತ್ಯರ್ಥಪಡಿಸಿದ ವಿಷಯವನ್ನು ಮತ್ತೆ ಪರಾಮರ್ಶೆ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೂ ಈ ಕಾರ್ಯವಾಗಬಾರದು' ಎಂಬ ಮೆಹ್ತಾ ಅವರ ಆಕ್ಷೇಪವನ್ನು ಪೀಠವು ಪರಿಗಣಿಸಿತು.
ಎರಡೂ ಕಡೆಯವರ ವಾದಗಳನ್ನು ಆಲಿಸಿದ ಪೀಠವು, ಒಂದು ಪ್ರಕರಣದ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಕ್ರಮವನ್ನು ವಿವರಿಸಿತು. ನಂತರ, ವಿಚಾರಣೆಯನ್ನು ನವೆಂಬರ್ 22ಕ್ಕೆ ಮುಂದೂಡಿತು.