ತಿರುವನಂತಪುರ: ಹಮಾಸ್ ವಿಚಾರವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ. ಪ್ಯಾಲೆಸ್ತೀನ್ ವಿರುದ್ಧ ಇಸ್ರೇಲ್ ಮಾಡುತ್ತಿರುವುದು ಒಂದು ಅತಿಕ್ರಮಣ ಮತ್ತು ಪ್ಯಾಲೆಸ್ತೀನ್ ಜನರು ಅನುಭವಿಸುತ್ತಿರುವುದು ಚಿತ್ರಹಿಂಸೆಯಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಹಮಾಸ್ ವಿಚಾರದ ಪ್ರಶ್ನೆಗೆ ಮುಖ್ಯಮಂತ್ರಿ ನುಣುಚಿಕೊಂಡರು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವೆ ಕೆ.ಕೆ.ಶೈಲಜಾ ಅವರು ಹಮಾಸ್ ಭಯೋತ್ಪಾದಕರು ಎಂಬ ಹೇಳಿಕೆ ನೀಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೂ ಪಿಣರಾಯಿ ಉತ್ತರಿಸಲು ನಿರಾಕರಿಸಿದರು. ಕೆ.ಕೆ.ಶೈಲಜಾ ಅವರಲ್ಲೇ ಆ ಬಗ್ಗೆ ಕೇಳಿ ಎಂದರು. ಸಿಪಿಎಂಗೆ ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಮತ್ತು ಕೇಂದ್ರ ಸಮಿತಿಯ ನಿಲುವಿನಲ್ಲಿ ದೃಢವಾಗಿ ನಿಂತಿದೆ ಎಂದು ಅವರು ಹೇಳಿದರು.
ನಿನ್ನೆ, ಕೆಕೆ ಶೈಲಜಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‍ನಲ್ಲಿ ಹಮಾಸ್ ಅನ್ನು ಭಯೋತ್ಪಾದಕರು ಎಂದು ಸಂಬೋಧಿಸಿದ್ದಕ್ಕಾಗಿ ಸಾಕಷ್ಟು ವಿರೋಧವನ್ನು ಎದುರಿಸಿದರು. ಸಿಪಿಎಂನ ನಿಲುವು ಇಸ್ರೇಲ್ ವಿರೋಧಿಯಾಗಿದ್ದು, ಪ್ಯಾಲೆಸ್ತೀನ್ ಮತ್ತು ಹಮಾಸ್ ಕೇವಲ ಪ್ರತೀಕಾರ ತೀರಿಸಿಕೊಂಡಿವೆ ಎಂದು ಶೈಲಜಾ ಟೀಕಿಸಿದ್ದರು.