ಕಾಸರಗೋಡು: ಭತ್ತದ ಬಯಲು ಸೇರಿದಂತೆ ಕೃಷಿಪ್ರದೇಶದ ಸಂರಕ್ಷಕರೆಂಬ ಐತಿಹ್ಯ ಪಡೆದಿರುವ ಕಾರ್ತಿಕ ಚಾಮುಮಡಿ, ಗುಳಿಗ, ಜಾನುವಾರು ಸಂರಕ್ಷಕ ಕಾಲಿಚ್ಚಾನ್ ದೈವಗಳ ಸಂಗಮ ಹೊಸದುರ್ಗದ ಅರಯಿ ಗ್ರಾಮದಲ್ಲಿ ಜರುಗಿತು.
ಹೊಸದುರ್ಗ ಅರಯಿಕುನ್ನು ಕಾರ್ತಿಕ ಕಾವು ಕಳಿಯಾಟ ಮಹೋತ್ಸವದ ಪೂರ್ವಭಾವಿಯಾಗಿ ಇಲ್ಲಿ ದ್ಯವಗಳ ಸಂಗಮ ನಡೆಯುತ್ತದೆ. ತೇಯತ್ತುಕಾರಿ, ಕಾರ್ತಿಕ ಚಾಮುಂಡಿ ಹಾಗೂ ಗುಳಿಗ ದೈವಗಳಿಗೆ ಕಾರ್ತಿಕ ಕಾವಿನಲ್ಲಿ ಪ್ರತಿವರ್ಷ ನೇಮೋತ್ಸವ ನಡೆಯುವುದು ವಾಡಿಕೆ. ಊರಲ್ಲಿ ಬೆಳೆಯುವ ಕೃಷಿಯನ್ನು ವೀಕ್ಷಿಸಲು ಹಾಗೂ ಜನರ ಕುಶಲೋಪರಿ ವಿಚಾರಿಸುವ ನಿಟ್ಟಿನಲ್ಲಿ ಮೂರು ದೈವಗಳು ಒಟ್ಟಾಗಿ ದೋಣಿಯಲ್ಲಿ ಹೊಳೆ ದಾಟಿ ಸಾಗುವ ದೃಶ್ಯಾವಳಿ ನಾಡಿನ ಜನತೆಯಲ್ಲಿ ಸಂಭ್ರಮದ ವಾತಾವರಣ ತಂದುಕೊಟ್ಟಿತು. ವರ್ಷಕ್ಕೊಮ್ಮೆ ಆಗಮಿಸುವ ದೈವಗಳನ್ನು ಭಕ್ತಿ, ಸಂಭ್ರಮದಿಂದ ಈ ಊರಿನ ಜನತೆ ಬರಮಾಡಿಕೊಳ್ಳುತ್ತಾರೆ.
ಹಿಂದೆ ರಾಜಾಡಳಿತ ಕಾಲದಿಂದಲೂ ಈ ಆಚರಣೆ ನಡೆದುಬರುತ್ತಿದೆ. ನೀಲೇಶ್ವರ ರಾಜಾಡಳಿತದ ಅಧೀನದಲ್ಲಿದ್ದ ಅರಯಿಯಿಂದ ಆರಂಭಗೊಂಡು ಕೊಡಗಿ ಪನ್ನಿಪ್ಪಳಿ ಪಾರ್ಥಸಾರಥೀ ದೇವಸ್ಥಾನ ವರೆಗಿರುವ ಭತ್ತದ ಬಯಲನ್ನು ತೇಯತ್ತುಕಾರಿ ಕಾರ್ತಿಕ ಚಾಮುಂಡಿ ಹಾಗೂ ಗುಳಿಗ ದೈವಗಳು ಸಂರಕ್ಷಿಸಿಕೊಂಡು ಬರುತ್ತಿರುವುದಾಗಿ ಐತಿಹ್ಯವಿದೆ. ಮೂರೂ ದೈವಗಳು ದೋಣಿ ಮೂಲಕ ಹೊಳೆ ದಾಟಿ ನಾಡಿಗೆ ಪ್ರವೇಶಿಸಿ ಅಲ್ಲಿನ ಕೃಷಿ, ಜಾನುವಾರು ಸೇರಿದಂತೆ ಮೃಗಗಳ ಸಂರಕ್ಷಣೆ ಬಗ್ಗೆ ದೈವಗಳು ಪರಸ್ಪರ ಸಮಾಲೋಚನೆ ನಡೆಸುವುದೂ ಭಕ್ತರಲ್ಲಿ ಕೌತುಕಕ್ಕೆ ಕಾರಣವಾಗುತ್ತಿದೆ. ದೈವಗಳ ದರ್ಶನಕ್ಕಾಗಿ ನೂರಾರು ಮಂದಿ ಇಲ್ಲಿ ಒಟ್ಟು ಸೇರುತ್ತಾರೆ.
ಕೃಷಿ ವೀಕ್ಷಣೆ, ಜನರ ಯೋಗಕ್ಷೇಮ ವಿಚಾರಿಸಲು ದೋಣಿ ಮೂಲಕ ತೇಯತ್ತುಕಾರಿ, ಕಾರ್ತಿಕ ಚಾಮುಂಡಿ ಹಾಗೂ ಗುಳಿಗ ದೈವಗಳ ಪಯಣ.