ಕಾಸರಗೋಡು: ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಏಕ ಕಾಲಕ್ಕೆ ವಿಜಿಲೆನ್ಸ್ ದಾಳಿ ನಡೆಸಲಾಯಿತು. ವಿಜಿಲೆನ್ಸ್ ನಿರ್ದೇಶಕರ ಆದೇಶ ಪ್ರಕಾರ ಉತ್ತರ ವಲಯ ಪೆÇಲೀಸ್ ವರಿಷ್ಠಾಧಿಕಾರಿ ಪ್ರಜೀಶ್ ತೋಟತ್ತಿಲ್ ಮೇಲ್ನೋಟ ಹಾಗೂ ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ವಿ.ಕೆ.ವಿಶ್ವಂಭರನ್ ನಾಯರ್ ಅವರ ನೇತೃತ್ವದಲ್ಲಿ ದಾಳಿ ಆಯೋಜಿಸಲಾಗಿತ್ತು. ಕಾಸರಗೋಡು ಜಿಲ್ಲೆಯ ಚೆಂಗಳ, ಮಧೂರು ಹಾಗೂ ತೃಕರಿಪುರ ಪಂಚಾಯಿತಿಗಳಲ್ಲಿ ವಿಜಿಲೆನ್ಸ್ ಇನ್ಸ್ ಪೆಕ್ಟರ್ ಕೆ.ಸುನುಮೋನ್ ಪಿ, ಸುನಿಲ್ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಕಾಮಗಾರಿಗಳ ಮಂಜೂರಾತಿಯಲ್ಲಿ ವಿವಿಧ ಅವ್ಯವಹಾರಗಳು ನಡೆದಿರುವುದು ಕಂಡುಬಂದಿದೆ. ಹಲವು ಅನಧಿಕೃತ ನಿರ್ಮಾಣ ಚಟುವಟಿಕೆಗಳನ್ನೂ ಪತ್ತೆಹಚ್ಚಲಾಗಿದೆ.
ಚೆಂಗಳ ಪಂಚಾಯಿತಿ ವ್ಯಾಪ್ತಿಯ ಹಲವು ಬಹುಮಹಡಿ ಕಟ್ಟಡಗಳು ಲೋಕೋಪಯೋಗಿ ಇಲಾಖೆ ಅಧೀನದ ಜಾಗದಲ್ಲೇ ನಿರ್ಮಿಸಿರುವುದನ್ನು ಪತ್ತೆಹಚ್ಚಲಾಗಿದೆ. ಬಹುತೇಕ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ, ರ್ಯಾಂಪ್, ಮಳೆನೀರು ಸಂಗ್ರಹಾಗಾರ ಇಲ್ಲದಿರುವುದನ್ನೂ ಪತ್ತೆಹಚ್ಚಲಾಗಿದೆ. ಕೆಲವು ಕಟ್ಟಡಗಳು ಆಕ್ಯುಪೆನ್ಸಿ ಸರ್ಟಿಫಿಕೇಟ್ ಪಡೆದ ನಂತರ ಇಲ್ಲಿನ ಪಾರ್ಕಿಂಗ್ ಜಾಗವನ್ನು ವಣಿಜ್ಯ ಬಳಕೆಗಾಗಿ ನೀಡಿರುವುದನ್ನೂ ವಿಜಿಲೆನ್ಸ್ ಪತ್ತೆಹಚ್ಚಿದೆ. ಇನ್ನು ಕೆಲವು ಕಟ್ಟಡಗಳನ್ನು ನಿರ್ಮಿಸಿ ಅನುಮತಿ ಪಡೆಯದೇ ವ್ಯಾಪಾರ ನಡೆಸುತ್ತಿರುವುದು, ಕೆಲವು ಕಟ್ಟಡಗಳನ್ನು ಆಕ್ಯುಪೆನ್ಸಿ ಸರ್ಟಿಫಿಕೇಟ್ ಲಭಿಸಿದ ಒಂದೋ ಎರಡೋ ವರ್ಷಗಳ ನಂತರ ಯಾವುದೇ ಅನುಮತಿಯಿಲ್ಲದೆ ಮೇಲ್ಬಾಗದಲ್ಲಿ ಇನ್ನೂ ಒಂದು ಅಂತಸ್ತು ನಿರ್ಮಿಸಿ ಇಲ್ಲಿ ಕೊಠಡಿಗಳನ್ನು ಬಾಡಿಗೆಗೆ ನೀಡಲಾಗಿದೆ. ಇಂತಹ ನಿರ್ಮಾಣಗಳಿಂದ ಪಂಚಾಯಿತಿಗಳಿಗೆ ಭಾರಿ ಆರ್ಥಿಕ ನಷ್ಟವುಂಟಾಗುತ್ತಿದೆ. ಸಂಬಂಧಪಟ್ಟ ಪಂಚಾಯಿತಿ ಕಾರ್ಯದರ್ಶಿ ಮತ್ತು ಸಹಾಯಕ ಇಂಜಿನಿಯರ್ ಹಾಗೂ ಇತರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿರುವುದಾಗಿ ವಿಜಿಲೆನ್ಸ್ ಪತ್ತೆಹಚ್ಚಿದೆ. ಇಂತಹ ಲೋಪಗಳಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ನಿರ್ದೇಶಕರಿಗೆ ಸಮಗ್ರ ತಪಾಸಣಾ ವರದಿಯನ್ನು ಸಲ್ಲಿಸಲಾಗುವುದು ಎಂದು ಡಿವೈಎಸ್‍ಪಿ ವಿಶ್ವಂಭರನ್ ನಾಯರ್ ತಿಳಿಸಿದ್ದಾರೆ.