ವಾಷಿಂಗ್ಟನ್: ಪೂರ್ವ ಸಿರಿಯಾದಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮತ್ತು ಬೆಂಬಲಿತ ಗುಂಪುಗಳ ಎರಡು ನೆಲೆಗಳ ಮೇಲೆ ಅಮೆರಿಕದ ಸೇನೆ ದಾಳಿ ನಡೆಸಿದೆ ಎಂದು ಪೆಂಟಗನ್ ತಿಳಿಸಿದೆ.
ಇರಾಕ್ ಮತ್ತು ಸಿರಿಯಾದಲ್ಲಿ ಅಮೆರಿಕದ ಸೇನೆ ವಿರುದ್ದ ನಡೆಸಿದ ದಾಳಿಗೆ ಪ್ರತಿದಾಳಿ ನಡೆಸಲು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆದೇಶ ಹೊರಡಿಸಿದ್ದಾರೆ.
ಇಸ್ರೇಲ್ ಹಾಗೂ ಹಮಾಸ್ ನಡುವೆ ಸಂಘರ್ಷ ತೀವ್ರಗೊಂಡಿರುವಂತೆಯೇ ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ಬೆಂಬಲಿತ ಪಡೆಗಳು ಅಮೆರಿಕ ಮತ್ತು ಮೈತ್ರಿ ಪಡೆಗಳ ಮೇಲೆ ಕನಿಷ್ಠ 19 ಬಾರಿ ದಾಳಿ ನಡೆಸಿವೆ ಎಂದು ಪೆಂಟಗನ್ ಹೇಳಿದೆ.
ಇರಾಕ್ ಮತ್ತು ಸಿರಿಯಾದಲ್ಲಿ ಅಮೆರಿಕದ ಸೇನೆಯ ಸಿಬ್ಬಂದಿಗಳ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಆತ್ಮರಕ್ಷಣೆಯ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಯಾಲ್ಡ್ ಆಸ್ಟಿನ್ ತಿಳಿಸಿದ್ದಾರೆ.
ಅಮೆರಿಕ ಸೇನೆಯ ವಿರುದ್ಧ ಇರಾನ್ ಬೆಂಬಲಿತ ಪಡೆಗಳ ದಾಳಿ ತಕ್ಷಣ ನಿಲ್ಲಬೇಕು. ಒಂದು ವೇಳೆ ದಾಳಿ ಮುಂದುವರಿದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೆಂಟಗನ್ ಎಚ್ಚರಿಸಿದೆ.
ಇರಾಕ್ ಗಡಿಗೆ ಹೊಂದಿಕೊಂಡಿರುವ ಸಿರಿಯಾದ ಅಬು ಕಮಾಲ್ ಪಟ್ಟಣದ ಸಮೀಪ ಶುಕ್ರವಾರ ಎರಡು ಎಫ್-16 ಫೈಟರ್ ಜೆಟ್ ಮೂಲಕ ಅಮೆರಿಕ ದಾಳಿ ನಡೆಸಿದೆ.
ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಗ್ರಿಗಳನ್ನು ಹೊಂದಿದ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ದಾಳಿಗೆ ಇಸ್ರೇಲ್‌ನ ನೆರವು ಪಡೆದಿಲ್ಲ ಎಂದು ಹೇಳಿದೆ. ಸಿರಿಯಾದಲ್ಲಿ 900 ಮತ್ತು ಇರಾಕ್‌ನಲ್ಲಿ 2500 ಪಡೆಗಳನ್ನು ಅಮೆರಿಕ ಹೊಂದಿದೆ.