ಕಾಸರಗೋಡು: ಭಾಷೆ ಮೇಲಿನ ಪ್ರೀತಿ ಸಂಸ್ಕøತಿ ಪೋಷಣೆಗೆ ಸಹಕಾರಿ ಎಂದು ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ಅವರು ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ವತಿಯಿಂದ ಕೃತಿ ಸಮೀಕ್ಷೆ, ಕೃತಿ ಬಿಡುಗಡೆ, ಕನ್ನಡ ಭವನ ಪ್ರಶಸ್ತಿ ಪ್ರದನ ಸಮಾರಂಭ-2023 ಕಾರ್ಯಕ್ರಮವನ್ನು ಕನ್ನಡ ಭವನ ಮತ್ತು ಗ್ರಂಥಾಲಯ ಸಭಾಂಗಣದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮನುಷ್ಯರ ಆಂತರಿಕ ಸೌಂದರ್ಯ ವೃದ್ಧಿಸುತ್ತದೆ. ಆ ರೀತಿಯ ಪರಿಪೂರ್ಣ ಶಿಕ್ಷಣದ ಅಗತ್ಯ ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿದೆ. ಇಂದು ಎಲ್ಲವೂ ಕೃತಕ ಬುದ್ಧಿಮತ್ತೆಯ ಯುಗವಾಗಿದ್ದು, ಇದು ಸ್ವಂತಿಕೆ ಹಾಗೂ ಖಾಸಗಿತನಕ್ಕೆ ಬಲುದೊಡ್ಡ ಆಘಾತ ತಂದೊಡ್ಡಲಿದೆ. ಭಾಷೆ ಪರಸ್ಪರ ಸಂಬಂಧ ಬೆಸೆಯಲು ಸಹಕಾರಿಂಯಾಗಿದ್ದು, ಭಾಷೆಯ ಬಗ್ಗೆ ದುರಭಿಮಾನ ಸಲ್ಲದು. ಸಂವಹನ ಮಾಧ್ಯಮವಾಗಿರುವ ಭಾಷೆಯ ಬಗ್ಗೆ ತೋರುವ ದುರಭಿಮಾನ, ವಿಘಟನೆಗೆ ಹಾದಿ ಮಾಡಿಕೊಡಲಿರುವುದಾಗಿ ತಿಳಿಸಿದರು.
ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕನ್ನಡ ಮಯೂರಿ ಪ್ರಶಸ್ತಿ ಪ್ರದಾನ, ಕನ್ನಡ ಭವನದ ಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಉದಯೋನ್ಮುಖ ಕವಯಿತ್ರಿ ರೇಖಾ ಸುಧೇಶ್ ರಾವ್ ಅವರ ನವಚೇತನ ಕವನ ಸಂಕಲನ ಬಿಡುಗಡೆ ನಡೆಯಿತು. ಕವಿ ಗುಣಾಜೆ ರಾಮಚಂದ್ರ ಭಟ್ ಕೃತಿ ಪರಿಚಯ ನೀಡಿದರು. ವೀಣಾ ನಾಗರಾಜ್ ವಾಮಂಜೂರು ಅವರ 'ನಂದಾ ದೀಪ'ಕೃತಿಯ ಬಗ್ಗೆ ಸಾಹಿತಿ ವಿರಾಜ್ ಅಡೂರು ಕೃತಿ ಪರಿಚಯ ನೀಡಿದರು. ಸಮಾಜ ಸಂಪದ ಕೃತಿಯ ಬಗ್ಗೆ ಕೃತಿಕರ್ತ ರವಿ ನಾಯ್ಕಾಪು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಮನರಾವ್ ಬೇಕಲ್-ಸಂಧ್ಯಾರಾಣಿ ಸಾರತ್ಯದ ಕನ್ನಡ ಭವನ ಪ್ರಕಾಶನ ಸಂಸ್ಥೆಗೆ ಚಾಲನೆ ನೀಡಲಾಯಿತು.
ಡಾ. ಪ್ರಮಿಳಾ ಮಾಧವ್ ಕಾಸರಗೋಡು, ಧಾರ್ಮಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ, ಡಾ. ಕೆ.ಜಿ ವೆಂಕಟೇಶ್, ಅರಿಬೈಲ್ ಗೋಪಾಲ ಶೆಟ್ಟಿ, ಎ.ಆರ್. ಸುಬ್ಬಯ್ಯಕಟ್ಟೆ, ಪ್ರೊ. ಎ.ಶ್ರೀನಾಥ್, ರಂಜನ್ ಕಾಸರಗೋಡು, ಕಮಲಾಕ್ಷ ಕಲ್ಲಗದ್ದೆ, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟ, ಶಶಿಕಾಂತ ಶೆಟ್ಟಿ, ಡಾ. ಕೆ.ವಿ ದೇವಪ್ಪ ಮಂಗಳೂರು, ಜಯಪ್ರಕಾಶ್ ಉಪಸ್ಥಿತರಿದ್ದರು. ಗ್ರಂಥಾಲಯ ಸಂಸ್ಥಾಪಕ ವಾಮನ ರಾವ್ ಬೇಕಲ್ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.