ಕಾಸರಗೋಡು: ಸ್ವಾತಂತ್ರ್ಯಾನಂತರದ ಏಕೀಕರಣ ಹೋರಾಟದಲ್ಲಿ ಗಡಿನಾಡು ಕಾಸರಗೋಡಿನ ಮಹನೀಯರ ಕೊಡುಗೆ ಅಪಾರವಾದುದು ಎಂಬುದಾಗಿ ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ತಿಳಿಸಿದ್ದಾರೆ. ಅವರು ಕಾಸರಗೋಡು ತಾಳಿಪಡ್ಪಿನ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಂಗಳೂರಿನ ಕರ್ನಾಟಕ ಸಾಮಾಜಿಕ ಸಾಂಸ್ಕøತಿಕ ಪ್ರತಿಷ್ಠಾನ ಆಶ್ರಯದಲ್ಲಿ ಜರುಗಿದ 'ಗಡಿನಾಡಿನಲ್ಲಿ ಕನ್ನಡ ಕಲರವ' ಸಾಂಸ್ಕøತಿಕ ಉತ್ಸವದ ಅಂಗವಾಗಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ 'ಕಾಸರಗೋಡಿನಲ್ಲಿ ಕನ್ನಡ ಹೋರಾಟ'ದ ಬಗ್ಗೆ ವಿಷಯ ಮಂಡಿಸಿ ಮಾತನಾಡಿದರು.
ಶಾಂತಾರಾಮ ಶೆಣೈ-ಸುಧಾಕರ ಅಗ್ಗಿತ್ತಾಯ ಅವರ ಬಲಿದಾನದ ನಂತರ ಕಾಸರಗೋಡಿನ ಕನ್ನಡಪರ ಹೋರಾಟ ಮತ್ತಷ್ಟು ಚುರುಕುಪಡೆದುಕೊಂಡರೂ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ದಿನಕಳೆದಂತೆ ಹೋರಾಟದ ಕಾವು ಕ್ಷೀಣಿಸುವಂತಾಯಿತು. ಕಳ್ಳಿಗೆ ಮಹಾಬಲ ಭಂಡಾರಿ, ಎಂ. ಉಮೇಶ್ ರಾವ್, ಡಾ. ಕಯ್ಯಾರ ಕಿಞಣ್ಣ ರೈ, ಖಂಡಿಗೆ ಶ್ಯಾಮ ಭಟ್ ಮುಂತಾದ ದಿಗ್ಗಜರು ವಿಲೀನೀಕರಣಕ್ಕಾಗಿ ನಡೆಸಿದ ಹೋರಾಟ ಯುವಜನಾಂಗಕ್ಕೆ ಸ್ಪೂರ್ತಿಯನ್ನು ತಂದುಕೊಟ್ಟಿದ್ದರೂ, ಮಹಾಜನ ವರದಿ ಜಾರಿಯ ಬಗೆಗಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಹೋರಾಟಕ್ಕೆ ತಣ್ಣೀರೆರೆಯುವಂತಾಯಿತು ಎಂದು ತಿಳಿಸಿದರು.
ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿಗತಿ ಕುರಿತು ಕೇಂದ್ರೀಯ ವಿದ್ಯಾಲಯದ ನಿವೃತ್ತ ಮುಖ್ಯ ಶಿಕ್ಷಕ ಎಸ್.ಎನ್ ಭಟ್ ಸೈಪಂಗಲ್ಲು ವಿಷಯ ಮಂಡಿಸಿ ಮಾತನಾಡಿ, ವಿಲೀನೀಕರಣ, ಮಹಾಜನ ವರದಿ ಜಾರಿ ಬಗ್ಗೆ ಗಡಿನಾಡ ಕನ್ನಡಿಗರು ಮರುಗದೆ, ಸಂವಿಧಾನಾತ್ಮಕವಾಗಿ ಕನ್ನಡಿಗರಿಗಿರುವ ಸವಲತ್ತುಗಳನ್ನು ಪಡೆದುಕೊಳ್ಳುವ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಕನ್ನಡ ಭಾಷೆ, ಕನ್ನಡಿಗರ ಅಸ್ಮಿತೆಗೆ ಉಂಟಾಗುತ್ತಿರುವ ಧಕ್ಕೆಯನ್ನು ಸಂವಿಧಾನಿಕ ಚೌಕಟ್ಟಿನೊಳಗೆ ಎದುರಿಸಲು ಕನ್ನಡಿಗರು ತಯಾರಾಗಬೇಕು ಎಂದು ತಿಳಿಸಿದರು.
ಹಿರಿಯ ವಕೀಲ ಎಂ. ಗುರುಪ್ರಸಾದ್ ಮಂಡ್ಯ ಸಮಾರಂಭ ಉದ್ಘಾಟಿಸಿದರು. ಮಂಗಳೂರಿನ ಕರ್ನಾಟಕ ಸಾಮಾಜಿಕ ಸಾಂಸ್ಕøತಿಕ ಪ್ರತಿಷ್ಠಾನ(ಕೆಎಸ್‍ಎಸ್‍ಪಿ)ಅಧ್ಯಕ್ಷೆ ಪುಷ್ಪಲತಾದೇವಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಶಿವಶಂಕರ್, ಧಾರ್ಮಿಕ ಮುಖಂಡ ಕೆ.ಎನ್ ವೆಂಕಟ್ರಮಣ ಹೊಳ್ಳ, ಉದ್ಯಮಿ ರಾಮ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ನಡೆಯುವ ಸನ್ಮಾನ ಸಮಾರಂಭದಲ್ಲಿ ಸಮಾಜಸೇವಕ ಝುಲ್ಫಿಕರ್ ಅಲಿ ಪೈವಳಿಕೆ(ಜೆಡ್.ಎ ಕಯ್ಯಾರ್), ಪತ್ರಕರ್ತ ಗಂಗಾಧರ ಯಾದವ್ ತೆಕ್ಕೆಮೂಲೆ, ಕಾಸರಗೋಡು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಡಾ. ಬೇ.ಸಿ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಲವು ಮಂದಿ ಕವಿಗಳು ಕವಿತೆ ವಾಚಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಡಾ. ವಾಣಿಶ್ರೀ ಮತ್ತು ಗುರುರಾಜ್ ನೇತೃತ್ವದ ಗಡಿನಾಡ ಸಾಂಸ್ಕøತಿಕ ಸಂಘದ ವತಿಯಿಂದ ನಾಟ್ಯ ಸಿಂಚನ, ಗೀತ ಗಾಯನ, ಸಮೂಹ ಗಾಯನ ಕಾರ್ಯಕ್ರಮ ಜರುಗಿತು.