ಕಾಸರಗೋಡು: ತ್ಯಾಜ್ಯ ನಿರ್ವಹಣೆಯಲ್ಲಿ ಲೋಪವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ. ಅವರು ಕಾಞಂಗಾಡಿನಲ್ಲಿ ಕೇರಳ ಘನತ್ಯಾಜ್ಯ ನಿರ್ವಹಣಾ ಯೋಜನೆಯ ಕಾಞಂಗಾಡ್ ಜಿಲ್ಲಾ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೇರಳದ 87 ನಗರಸಭೆಗಳು ಮತ್ತು 6ಮಹಾನಗರಪಾಲಿಕೆಗಳಲ್ಲಿ 2500 ಕೋಟಿ ರೂ. ಮೊತ್ತದ ಬೃಹತ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇರಳದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯದ ಶೇಕಡಾ 60 ರಷ್ಟು ನಗರ ಪ್ರದೇಶಗಳಿಂದ ಸಂಗ್ರಹಗೊಳ್ಳುತ್ತಿದೆ. ಇದಕ್ಕಾಗಿ ವಿಶ್ವಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಬ್ಯಾಂಕ್ ಸಹಕಾರದೊಂದಿಗೆ ನಗರಗಳನ್ನು ಕಸ ಮುಕ್ತಗೊಳಿಸುವ ಯೋಜನೆಯನ್ವಯ ಕೇರಳ ಘನತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಸರ್ಕಾರದ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ ಕಾಸರಗೋಡು, ಕಾಞಂಗಾಡು ಮತ್ತು ನೀಲೇಶ್ವರಂ ನಗರಸಭೆಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಮೂರು ನಗರಸಭೆಗಳಲ್ಲಿ 21.467 ಕೋಟಿ ರೂ.ಗಳ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಪೈಕಿ 6.404 ಕೋಟಿ ರೂ.ಗಳ ಯೋಜನೆಗಳಿಗೆ ಇದುವರೆಗೆ ಅನುಮೋದನೆ ನೀಡಲಾಗಿದೆ.
ಕಾಞಂಗಾಡು ಬ್ಲಾಕ್ ಪಂಚಾಯತ್ ನಲ್ಲಿ ನಡೆದ ಸಮಾರಂಭದಲ್ಲಿ ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ, ಕಾಞಂಗಾಡು ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಅಬ್ದುಲ್ ರಹಮಾನ್, ಕಾಞಂಗಾಡ್ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹ್ಮದ್ ಭಾಗವಹಿಸಿದ್ದರು.