ಕೊಚ್ಚಿ: ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ರೊಬೊಟಿಕ್ ಶಸ್ತ್ರಚಿಕಿತ್ಸೆಯ ಯುಗದಲ್ಲಿ ಆರೋಗ್ಯ ವಿಮೆ ಪಡೆಯಲು ಕಂಪನಿಗಳು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾದ ಸ್ಥಿತಿಯು ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಎರ್ನಾಕುಐಂ ಜಿಲ್ಲಾ ಗ್ರಾಹಕ ನ್ಯಾಯಾಲಯ ಗಮನಾರ್ಹ ನ್ಯಾಯ ಸೂಚನೆ ನೀಡಿದೆ.
ಮರಡು ನಿವಾಸಿ ಜಾನ್ ಮಿಲ್ಟನ್ ಅವರ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ವಿಮಾ ಕಂಪನಿ ವ್ಯಯಿಸಿದ ಮೊತ್ತವನ್ನು ನಿರಾಕರಿಸಿದ ಪ್ರಕರಣದಲ್ಲಿ ಈ ಆದೇಶ ನೀಡಲಾಗಿದೆ. ಆಸ್ಪತ್ರೆಯಲ್ಲಿ ಒಂದು ದಿನವೂ ಕಳೆಯದೆ ಆಧುನಿಕ ತಂತ್ರಜ್ಞಾನದ ನೆರವಿನಿಂದ ಶಸ್ತ್ರಚಿಕಿತ್ಸೆ ನಡೆಸಿ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗದ ಕಾರಣ ಒಪಿ ಚಿಕಿತ್ಸೆ ಎಂದು ಪರಿಗಣಿಸಿ ವಿಮಾ ಕಂಪನಿ ಕ್ಲೈಮ್ ಅನ್ನು ತಿರಸ್ಕರಿಸಿದ ಪರಿಸ್ಥಿತಿಯಲ್ಲಿ ಪಾಲಿಸಿದಾರರು ಎರ್ನಾಕುಳಂ ಜಿಲ್ಲಾ ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ಈ ಹಿಂದೆ ಒಳರೋಗಿಗಳ ಚಿಕಿತ್ಸೆಯ ಅಗತ್ಯವಿದ್ದ ಹಲವು ಪ್ರಕರಣಗಳನ್ನು ಈಗ ತಂತ್ರಜ್ಞಾನದ ಸಹಾಯದಿಂದ ಗಂಟೆಗಳಲ್ಲಿ ಪೂರ್ಣಗೊಳಿಸಬಹುದು. ದೇಶದಲ್ಲಿ ವಿಜ್ಞಾನ-ತಂತ್ರಜ್ಞಾನ ನೆರವಿಂದ ಆಧುನಿಕ ವ್ಯವಸ್ಥೆಯ ಚಿಕಿತ್ಸೆ ಬೆಳೆಯುತ್ತಿರುವ ಹೊತ್ತಲ್ಲಿ, ವಿಮೆಗಳಂತಹ ಸೇವಾ ಕ್ಷೇತ್ರಗಳು ಸಹ ಪ್ರಗತಿಶೀಲ ಗುಣವನ್ನು ತೋರಿಸಬೇಕು ಎಮದು ನ್ಯಾಯಾಲಯ ಬೊಟ್ಟುಮಾಡಿದೆ.
ಚಿಕಿತ್ಸೆಯು ಅಲ್ಪಾವಧಿಯೊಳಗೆ ಕೊನೆಗೊಂಡರೂ ಸಹ, ವಿಮಾ ರಕ್ಷಣೆಯು ಅರ್ಹವಾಗಿರುತ್ತದೆ. ಸಮೀಪ ದೃಷ್ಟಿ ಚಿಕಿತ್ಸೆಗಾಗಿ ಬಳಸಲಾಗುವ ನಿರ್ದಿಷ್ಟ ಚುಚ್ಚುಮದ್ದುಗಳು ವಿಮೆಯ ವ್ಯಾಪ್ತಿಗೆ ಒಳಪಡುತ್ತವೆ ಎಂಬ ವಿಮಾ ನಿಯಂತ್ರಣ ಪ್ರಾಧಿಕಾರದ ಸುತ್ತೋಲೆಯನ್ನು ನ್ಯಾಯಾಲಯವು ಪರಿಗಣಿಸಿದೆ.
ವಿಮಾ ಕಂಪನಿಯ ಕ್ರಮವು ಪಾಲಿಸಿದಾರರ ಸೇವೆಯ ಉಲ್ಲಂಘನೆಯಾಗಿದೆ ಎಂದು ಮನವರಿಕೆ ಮಾಡಿದ ನ್ಯಾಯಾಲಯವು 30 ದಿನಗಳಲ್ಲಿ 57,720 ರೂ. ಪಾವತಿಸಲು ಸೂಚಿಸಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಡಿ.ಬಿ. ಬಿನು, ಸದಸ್ಯರಾದ ವೈಕಂ ರಾಮಚಂದ್ರನ್, ಟಿ.ಎನ್. ಶ್ರೀವಿದ್ಯಾ ಅವರಿದ್ದ ಪೀಠ ಈ ತೀರ್ಪು ಪ್ರಕಟಿಸಿದೆ.