ಕೋಲ್ಕತಾ: ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಎರಡು ನಿಮಿಷಿದ ಸುಖಕ್ಕಾಗಿ ತಪ್ಪು ಮಾಡಬೇಡಿ. ಇದರಿಂದ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಲ್ಕತ್ತಾ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಮತ್ತೊಂದೆಡೆ, ಹದಿಹರೆಯದ ಹುಡುಗರು ಸಹ ಯುವತಿಯರು ಮತ್ತು ಮಹಿಳೆಯರನ್ನು ಗೌರವಿಸಬೇಕು. ಅವರ ಘನತೆ ಮತ್ತು ದೈಹಿಕ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಬುಧವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಶ್ ಮತ್ತು ಪಾರ್ಥ ಸಾರಥಿ ಸೇನ್ ಅವರ ವಿಭಾಗೀಯ ಪೀಠ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸೆಷನ್ಸ್ ಕೋರ್ಟ್ ನಿಂದ ಜೈಲು ಶಿಕ್ಷೆಗೊಳಗಾದ ಯುವಕನನ್ನು ಖುಲಾಸೆಗೊಳಿಸಿದ್ದು, ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಪ್ರಚೋದನೆ ನಿಯಂತ್ರಿಸಿಕೊಳ್ಳಬೇಕು ಎಂದು ಹೇಳಿದೆ.
2022ರಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗ ಮತ್ತು ಹುಡುಗಿ ಲೈಂಗಿಕ ಕ್ರಿಯೆ ನಡೆಸಿದ್ದು, ಹುಡುಗನ ಮೇಲೆ ಅತ್ಯಾಚಾರ ಆರೋಪವನ್ನು ಹೊರಿಸಿದ್ದು, ಸೆಷನ್ಸ್ ನ್ಯಾಯಾಲಯ ಆತನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸ್ವತಃ ಹುಡುಗಿಯೇ ನಮ್ಮಿಬ್ಬರ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆ ನಡೆದಿದೆ. ನಮಗೆ ಮದುವೆಯಾಗಿದೆ ಎಂದು ಹೇಳಿದ್ದಾಳೆ. ಆದರೆ ಭಾರತದ ಕಾನೂನಿನ ಪ್ರಕಾರ ಲೈಂಗಿಕ ಕ್ರಿಯೆ ನಡೆಸಲು 18 ವರ್ಷ ಮೇಲ್ಪಟ್ಟಿರಬೇಕು, ಇಲ್ಲದಿದ್ದರೆ ಇದು ಅಪರಾಧ ಎಂದು ಸೆಷನ್ಸ್ ನ್ಯಾಯಾಲಯ ಹೇಳಿದೆ. ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, 16 ವರ್ಷಕ್ಕಿಂತ ಮೇಲ್ಪಟ್ಟ ಹದಿಹರೆಯದವರನ್ನು ಒಳಗೊಂಡ ಒಪ್ಪಿಗೆಯ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಹೇಳಿದೆ.
ಹದಿಹರೆಯದ ವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ಉಂಟಾಗುವುದು ಸಹಜ. ಆದರೆ ಅವುಗಳು ಆ ವ್ಯಕ್ತಿಯ(ಹುಡುಗಿ ಅಥವಾ ಹುಡುಗ) ಲೈಂಗಿಕ ಪ್ರಚೋದನೆ ಮೇಲೆ ನಿಂತಿರುತ್ತದೆ. ಹುಡುಗಿಯರು ತಮ್ಮ ಲೈಂಗಿಕ ಪ್ರಚೋದನೆಯನ್ನು ನಿಯಂತ್ರಿಸಬೇಕು ಹಾಗೂ ಎರಡು ನಿಮಿಷಗಳ ಸಂತೋಷಕ್ಕೆ ಈ ತಪ್ಪುಗಳನ್ನು ಮಾಡಬಾರದು ಎಂದು ಹೈಕೋರ್ಟ್ ಹೇಳಿದೆ.