ಗಾಜಾ ಪಟ್ಟಿ: ಹಮಾಸ್ ಬಂಡುಕೋರ ಸಂಘಟನೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ವಾಯುದಾಳಿ ಆರಂಭಿಸಿದ ಒಂದು ವಾರದಲ್ಲಿ ಗಾಜಾ ಪಟ್ಟಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ನೆಲೆ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಭಾನುವಾರ ಹೇಳಿದೆ.
ಇಸ್ರೇಲ್ ಸರ್ಕಾರವು ಹಮಾಸ್ ಸಂಘಟನೆಯ ವಿರುದ್ಧ ಅಕ್ಟೋಬರ್ 8ರಂದು (ಭಾನುವಾರ) ಯುದ್ಧ ಘೋಷಣೆ ಮಾಡಿದೆ.
ಗಾಜಾ ಮೇಲೆ ಭೂಧಾಳಿ ನಡೆಸಲು ಇಸ್ರೇಲ್ ಸಜ್ಜಾಗಿದೆ. ದೇಶದ ದಕ್ಷಿಣ ಭಾಗದಲ್ಲಿ ಸಹಸ್ರಾರು ಯೋಧರನ್ನು, ಭಾರಿ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಸೇನೆ ನಿಯೋಜಿಸಿದೆ. ಭೂಧಾಳಿ ನಡೆಸಲು ಅದು ರಾಜಕೀಯ ನಾಯಕತ್ವದ ಹಸಿರು ನಿಶಾನೆಗೆ ಕಾಯುತ್ತಿದೆ. ಅಲ್ಲದೆ, ಗಡಿಗೆ ಸನಿಹದಲ್ಲಿ ಇದ್ದ ತನ್ನ ಪ್ರಜೆಗಳನ್ನು ಇಸ್ರೇಲ್ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಿದೆ.
'ಪ್ಯಾಲೆಸ್ಟೀನಿಯನ್ನರು ತಮ್ಮ ಮನೆಗಳನ್ನು ತೊರೆಯುತ್ತಿರುವುದು ಇನ್ನೂ ನಿಂತಿಲ್ಲ. ಹೀಗಾಗಿ ನೆಲೆ ಕಳೆದುಕೊಳ್ಳಲಿರುವ ಜನರ ಸಂಖ್ಯೆಯು ಇನ್ನೂ ಹೆಚ್ಚಾಗಬಹುದು' ಎಂದು ಪ್ಯಾಲೆಸ್ಟೀನ್ ನಾಗರಿಕರಿಗೆ ಪರಿಹಾರ ಕಲ್ಪಿಸಲು ಕೆಲಸ ಮಾಡುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿ ಯುಎನ್‌ಆರ್‌ಡಬ್ಲ್ಯುಎ ಹೇಳಿದೆ.
ಪ್ಯಾಲೆಸ್ಟೀನ್ ಜನ ತಮ್ಮಿಂದ ಸಾಧ್ಯವಾದ ವಸ್ತುಗಳನ್ನು, ಬಟ್ಟೆಗಳನ್ನು ಕಾರು, ವ್ಯಾನುಗಳಲ್ಲಿ ತುಂಬಿಸಿಕೊಂಡು ಸುರಕ್ಷಿತ ನೆಲೆ ಅರಸಿ ಹೋಗುತ್ತಿರುವುದು ಈಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಅವರು ಬೀದಿ ಬದಿಗಳಲ್ಲಿ ಮತ್ತು ವಿಶ್ವಸಂಸ್ಥೆ ನಡೆಸುತ್ತಿರುವ ಶಾಲೆಗಳಲ್ಲಿ ನೆಲೆ ಹುಡುಕಿಕೊಳ್ಳಬೇಕಾಗಿದೆ. ಅವರಿಗೆ ಗಾಜಾ ಪಟ್ಟಿಯಿಂದ ಹೊರ ನಡೆಯಲು ಅವಕಾಶಗಳು ಇಲ್ಲವಾಗಿವೆ.
ಇತ್ತ ಇಸ್ರೇಲ್‌ನಲ್ಲಿ, ಹಮಾಸ್ ಬಂಡುಕೋರರು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವ ಜನರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಾಗಿದೆ. 'ನಾವು ಅವರನ್ನು ವಾಪಸ್ ಕರೆದುಕೊಂಡು ಬರಬೇಕು' ಎಂದು ಒತ್ತೆಯಾಳುಗಳ ಸಂಬಂಧಿಕರು ಹೇಳಿದ್ದಾರೆ.