ಕುಂಬಳೆ: ಅನಂತಪುರ ಪರಿಸರದಲ್ಲಿ ದುರ್ಗಂಧ ಬೀರುತ್ತಿರುವ ಕೋಳಿ ತ್ಯಾಜ್ಯ ಸಂಸ್ಕರಣಾ ಕಾರ್ಖಾನೆಗಳಿಗೆದುರಾಗಿ ‘ಅನಂತಪುರ ಉಳಿಸಿ’ ಕ್ರಿಯಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಸೋಮವಾರ ಬೆಳಗ್ಗೆ 10 ಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಚಾಲನೆ ನೀಡಲಾಯಿತು.
ಕ್ರಿಯಾ ಸಮಿತಿ ಅಧ್ಯಕ್ಷ ಶರೀಫ್ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯ ಜನಾರ್ಧನ ಕಣ್ಣೂರು ಧರಣಿ ಸತ್ಯಾಗ್ರಹ ಉದ್ಘಾಟಿಸಿ ಮಾತನಾಡಿ, ಇದು ಜೀವನ್ಮರಣ ಹೋರಾಟವಾಗಿದ್ದು, ಯಾವುದೇ ಅಭಿವೃದ್ಧಿಗೆ ಎದುರಾಗಿ ಅಲ್ಲ. ಪರಿಸರದಲ್ಲಿ ಜನರ ಆರೋಗ್ಯಕ್ಕೆ ಈ ಕಾರ್ಖಾನೆಗಳ ದುರ್ಗಂಧ ಹಾನಿಕಾರಕ. ಆನಜೀವನವನ್ನು ಬಲಿಗೊಡುವ ಇಂತಹ ಕಾರ್ಖಾನೆಗಳು ಸ್ಥಳಾಂತರಗೊಳ್ಳಬೇಕು ಎಂದು ಅವರು ಹೇಳಿದರು.
ಸಮಿತಿ ಸದಸ್ಯ ಸ್ವಾಗತ್ ಸೀತಾಂಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯ ಬೆಳವಣಿಗೆ, ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಮಿತಿ ಕಾರ್ಯದರ್ಶಿ ಸುನಿಲ್ ಅನಂತಪುರ ಸ್ವಾಗತಿಸಿ, ಸಮಿತಿ ಸದಸ್ಯ ಅವಿನಾಶ್ ಕಾರಂತ ವಂದಿಸಿದರು.
ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ಅಜಯ್, ಪ್ರಮುಖರಾದ ನಾರಾಯಣ ಬಳಕ್ಕಿಲ, ಮನೋಹರನ್ ಕಾಮನಬೈಲ್, ಗೋಪಾಲ ಮುಖಾರಿ ಪೆರ್ಣೆ, ಚಂದ್ರಶೇಖರ ಅನಂತಪುರ, ಇ.ಕೆ ಮೊಹಮ್ಮದ್ ಕುಂಞÂ, ಅಬ್ದುಲ್ಲ ಪುತ್ತಿಗೆ, ಹರೀಶ್ ಸಿದ್ದಿಬೈಲ್, ಜಯಂತ ಪಾಟಾಳಿ, ಸುಜಿತ್ ರೈ ಕುಂಬಳೆ, ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ, ಉದ್ಯಮಿ ನಸೀರ್ ಕಣ್ಣೂರ್ ಸಹಿತ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಊರಿನ ಗಣ್ಯರು ಭಾಗವಹಿಸಿ ಮಾತನಾಡಿದರು.