ಮಂಗಳೂರು: ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆಗಳ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ರಾಯಲ್ ಬಹ್ರೈನ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ಮಂಗಳೂರು ಮೂಲದ ಡಾ.ಸುನೀಲ್ ರಾವ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಗಾಝಾ ಪಟ್ಟಿ ಮೇಲೆ ಇಸ್ರೇಲ್ ಆಕ್ರಮಣದಿಂದ ಭಾರೀ ನಷ್ಟ ಆಗುತ್ತಿದ್ದು, ಈ ಕುರಿತು ಸುನೀಲ್ ರಾವ್ ಅವರು ಮಾಡಿದ್ದ ಪೋಸ್ಟ್ ಗಳು ಇಸ್ರೇಲ್‌ಗೆ ಬೆಂಬಲ ಸೂಚಿಸಿದ್ದವು.
ಪೋಸ್ಟ್ ಕುರಿತು ಸಾಮಾಜಿಕ ಜಾಲತಾಣ ಬಳಕೆದಾರರು ವರದಿ ಮಾಡಿದ ನಂತರ ಈ ವಿಚಾರ ಬಹ್ರೈನ್ ಅಧಿಕಾರಿಗಳ ಗಮನ ಸೆಳೆಯಿತು.
ಈ ಕುರಿತು ಆಸ್ಪತ್ರೆಯು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಡಾ. ರಾವ್ ಅವರ ಅಭಿಪ್ರಾಯಗಳು ವೈಯಕ್ತಿಕ ಮತ್ತು ಸಂಸ್ಥೆಯ ಮೌಲ್ಯಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ಅಧಿಕೃತ ಹೇಳಿಕೆಯನ್ನು ನೀಡಿದೆ. ಜೊತೆಗೆ, ಅವರ ಹೇಳಿಕೆಗಳು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ. ಆ ಕಾರಣಕ್ಕಾಗಿ ಅವರನ್ನು ತಕ್ಷಣದಿಂದಲೇ ಕೆಲಸದಿಂದ ವಜಾಗೊಳಿಸಲಾಯಿತು ಎಂದು ಹೇಳಿದೆ.
ತಮ್ಮ ಪೋಸ್ಟ್ ವಿವಾದ ಸ್ವರೂಪ ಪಡೆದುಕೊಂಡ ಬಳಿಕ, ಡಾ. ರಾವ್ ಅವರು, ಮತ್ತೊಂದು ಪೋಸ್ಟ್ ಮಾಡಿ ಕ್ಷಮೆಯಾಚಿಸಿದ್ದಾರೆ.
ಈ ವೇದಿಕೆಯಲ್ಲಿ ನಾನು ಪೋಸ್ಟ್ ಮಾಡಿದ ಹೇಳಿಕೆಗೆ ಕ್ಷಮೆಯಾಚಿಸಲು ಬಯಸುತ್ತೇನೆ. ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ನನ್ನ ಟ್ವೀಟ್ ಸಂವೇದನಾ ರಹಿತವಾಗಿತ್ತು. ಒಬ್ಬ ವೈದ್ಯನಾಗಿ ನಾನು ಎಲ್ಲಾ ಜೀವಗಳನ್ನು ಗೌರವಿಸುತ್ತೇನೆ. ನಾನು ಈ ದೇಶ, ಇಲ್ಲಿನ ಜನರು ಮತ್ತು ಅವರ ಧರ್ಮವನ್ನು ಆಳವಾಗಿ ಗೌರವಿಸುತ್ತೇನೆ. ನಾನು ಕಳೆದ 10 ವರ್ಷಗಳಿಂದ ಇಲ್ಲಿದ್ದೇನೆಂದು ಹೇಳಿದ್ದಾರೆ.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು(ಕೆಎಂಸಿ) ಹಾಗೂ ವಿಶಾಖಪಟ್ಟಣಂನ ಆಂಧ್ರ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿ ಮಂಗಳೂರಿನ ಡಾ. ಸುನೀಲ್ ರಾವ್ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಈಗಾಗಲೇ ಆಸ್ಪತ್ರೆಯ ಅಧಿಕೃತ ವೆಬ್‌ಸೈಟ್‌ನಿಂದ ಅವರ ಪ್ರೊಫೈಲ್ ಅನ್ನು ತೆಗೆದುಹಾಕಲಾಗಿದೆ.