ಕಾಸರಗೋಡು: ಬೇಕಲ್ ಬೀಚ್ ಉತ್ಸವದಂತಹ ಕಾರ್ಯಕ್ರಮ ಪ್ರವಾಸೋದ್ಯಮ ಕ್ಷೇತ್ರದ ಉನ್ನತಿ ಮತ್ತು ಜಾಗೃತಿಯಲ್ಲಿ ಪ್ರಮುಖ ಮೈಲಿಗಲ್ಲುಗಳಾಗಿವೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ರೋಶಿ ಅಗಸ್ಟಿನ್ ತಿಳಿಸಿದ್ದಾರೆ. ಅವರು ಡಿ.22ರಿಂದ 31ರವರೆಗೆ ನಡೆಯಲಿರುವ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವದ ಎರಡನೇ ಆವೃತ್ತಿಯ ಬ್ರೋಷರ್ ಬಿಡುಗಡೆಗೊಳಿಸಿ ಮಾತನಾಡಿದರು.
ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿಮಹತ್ತರ ಬದಲಾವಣೆ ಗೋಚರಿಸುತ್ತಿದ್ದು, ಕೇರಳದ ಪ್ರವಾಸಿ ತಾಣಗಳಲ್ಲಿ ದೇಶೀಯ ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಲು ಕಾರಣವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಜಲಸಂಪನ್ಮೂಲಲ ಖಾತೆ, ಜಲ ಪ್ರವಾಸೋದ್ಯಮ ಪರಿಕಲ್ಪನೆಯನ್ನು ಜಾರಿಗೆ ತರುತ್ತಿದೆ. ನೀರಾವರಿ ಇಲಾಖೆಯ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವ ಪ್ರದೇಶಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸರ್ಕಾರ ಜಾರಿಗೆ ತರಲು ಶ್ರಮಿಸುತ್ತಿರುವುದಾಗಿ ತಿಳಿಸಿದರು. ಬೇಕಲ ಪಳ್ಳಿಕ್ಕರ ಬೀಚ್ ಪಾರ್ಕ್‍ನಲ್ಲಿ ನಡೆದ ಸಮಾರಂಭದಲ್ಲಿ ಬೇಕಲ ಬೀಚ್ ಉತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಜಿಪಂ ಉಪಾಧ್ಯಕ್ಷ ನವಾಜ್ ಪಾದೂರು, ಮುಖ್ಯ ಸಂಯೋಜಕ, ಬಿಆರ್‍ಡಿಸಿ ಎಂಡಿ ಪಿ.ಶಿಜಿನ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿನೋಜ್ ಚಾಕೊ, ಪ್ರಚಾರ ಸಮಿತಿ ಅಧ್ಯಕ್ಷ ಕೆ. ಇ ಬಕ್ಕರ್, ಸಂಚಾಲಕ ಹಾಗೂ ಜಿಲ್ಲಾ ಯುವ ಸಮನ್ವಯಾಧಿಕಾರಿ ಎ.ವಿ.ಶಿವಪ್ರಸಾದ್, ಸಂಘಟನಾ ಸಮಿತಿ ಸದಸ್ಯರಾದ ಸುಕುಮಾರನ್ ಪೂಚಕಾಡ್, ಎಂ.ಎ.ಲತೀಫ್, ವಿ.ಸೂರಜ್, ಪಿ.ಎಚ್.ಹನೀಫ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಮಧು ಮುದಿಯಕ್ಕಾಲ್ ಉಪಸ್ಥಿತರಿದ್ದರು.