ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿನ ಭಾರತೀಯ ಪೋಸ್ಟ್‌ಗಳ ಮೇಲೆ ಮತ್ತು ಹಳ್ಳಿಗಳ ಮೇಲೆ ಪಾಕಿಸ್ತಾನ ಸೇನೆ ಇತ್ತೀಚೆಗೆ ಅಪ್ರಚೋದಿತ ಗುಂಡಿನ ದಾಳಿ ಮತ್ತು ಮೋರ್ಟಾರ್ ಶೆಲ್ ದಾಳಿಗೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಶನಿವಾರ ತೀವ್ರ ಪ್ರತಿಭಟನೆ ದಾಖಲಿಸಿದೆ.
ಬಿಎಸ್ ಎಫ್ ಪಾಕಿಸ್ತಾನ ರೇಂಜರ್‌ಗಳನ್ನು ಕರೆಯಿಸಿ ತೀವ್ರ ಪ್ರತಿಭಟನೆ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಚೇತ್‌ಗಢ್‌ನ ಬಾರ್ಡರ್ ಔಟ್‌ಪೋಸ್ಟ್ ಆಕ್ಟ್ರಾಯ್‌ನಲ್ಲಿ ಇಂದು ಒಂದು ಗಂಟೆಯ ಕಾಲ ನಡೆದ ಕಮಾಂಡರ್ ಮಟ್ಟದ ಸಭೆಯಲ್ಲಿ ಪ್ರತಿಭಟನೆಯನ್ನು ದಾಖಲಿಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ರಾತ್ರಿ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಬ್ಬರು ಬಿಎಸ್‌ಎಫ್ ಯೋಧರು ಸೇರಿದಂತೆ ಐವರು ಗಾಯಗೊಂಡಿದ್ದರು.
ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ ನಡೆದಿದೆ. ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ಭಾರತೀಯ ಪೋಸ್ಟ್‌ಗಳ ಮೇಲೆ ಗುರುವಾರ ರಾತ್ರಿ ೮ ಗಂಟೆ ಸುಮಾರಿಗೆ ಪಾಕಿಸ್ತಾನಿ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಪಡೆಗಳು ಕೂಡ ಪ್ರತಿದಾಳಿ ನಡೆಸಿವೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ರೇಂಜರ್‌ಗಳು ಜನವಸತಿ ಪ್ರದೇಶಗಳಲ್ಲಿ ಮಾರ್ಟರ್ ಶೆಲ್‌ಗಳನ್ನು ಹಾರಿಸಿದ್ದಾರೆ. ಇದರಿಂದ ಗಡಿ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಅರ್ನಿಯಾ, ಸುಚ್ಟ್‌ಗಢ್, ಸಿಯಾ, ಜಬೋವಾಲ್ ಮತ್ತು ಟ್ರೆವಾ ಪೋಸ್ಟ್ಗಳು ದಾಳಿಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ.