ತಿರುವನಂತಪುರಂ: ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಚಿತ್ರಮಂದಿರಗಳನ್ನು ಪ್ರವೇಶಿಸಿ, ಅರೆಬೆತ್ತಲಾಗಿ ಪ್ರೇಕ್ಷಕರ ಪರ್ಸ್ ಕದಿಯುತ್ತಿದ್ದ ಖತರ್ನಾಕ್ ಖದೀಮನ್ನು ಕೇರಳ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ. ಬಂಧಿತ ಖದೀಮನನ್ನು ವಿಪಿನ್ (34) ಎಂದು ಗುರುತಿಸಲಾಗಿದೆ.
ಕಳೆದ ದಿನ ಅಟ್ಟಿಂಗಲ್ ಗಂಗಾ ಥಿಯೇಟರ್‌ನಲ್ಲಿ ಸೆಕೆಂಡ್ ಶೋ ವೀಕ್ಷಿಸಲು ಬಂದವರಿಂದ ವಾಲೆಟ್‌ಗಳು ಕಾಣೆಯಾಗಿರುವ ಬಗ್ಗೆ ಅಟ್ಟಿಂಗಲ್ ಪೊಲೀಸರಿಗೆ ದೂರು ಬಂದಿತ್ತು. ಈ ದೂರಿನ ಮೇರೆಗೆ ಹತ್ತಿರದ ಎಲ್ಲ ಥಿಯೇಟರ್‌ಗಳಲ್ಲಿ ಸಮಗ್ರ ಹುಡುಕಾಟ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದರು. ಕಜಕುಟ್ಟಂನಲ್ಲಿ ಇದೇ ಶೈಲಿಯಲ್ಲಿ ಕಳ್ಳತನವನ್ನು ಮಾಡುವಾಗ ಅಲ್ಲಿನ ನೌಕರರು ರೆಡ್‌ಹ್ಯಾಂಡ್ ಆಗಿ ವಿಪಿನ್ನನ್ನು ಹಿಡಿದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಹೋಗಿ ಆತನನ್ನು ಬಂಧಿಸಿದ್ದಾರೆ. ವಿಪಿನ್, ಅಪರಾಧ ಹಿನ್ನೆಲೆ ಹೊಂದಿದ್ದು, ಆತ ಓರ್ವ ರೌಡಿಶೀಟರ್ ಆಗಿದ್ದು, ತಂಪನೂರು ಪೊಲೀಸರ ವಶದಲ್ಲಿದ್ದ ಎಂದು ತಿಳಿದು ಬಂದಿದೆ.
ಕಳ್ಳತನ ಮಾಡುವಾಗ ವಿಪಿನ್ ವಿಚಿತ್ರ ಮಾರ್ಗಗಳನ್ನು ಅನುಸರಿಸುತ್ತಾನೆ. ಸಿನಿಮಾ ಟಿಕೆಟ್ ಖರೀದಿಸಿದ ನಂತರ ವಿಪಿನ್, ಥಿಯೇಟರ್‌ನಲ್ಲಿ ಏಕಾಂತ ಪ್ರದೇಶಕ್ಕೆ ತೆರಳುತ್ತಾನೆ. ಅಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆಬೆತ್ತಲೆಯಾಗುತ್ತಾನೆ. ನಂತರ, ಪ್ರೇಕ್ಷಕರು ಇರುವ ಇತರರ ಆಸನಗಳ ಹಿಂದೆ ತೆವಳುತ್ತಾ ಹೋಗಿ ಗೊತ್ತಾಗದಂತೆ ಚಾಣಾಕ್ಷತನದಿಂದ ಪರ್ಸ್ಗಳನ್ನು ಕದಿಯುತ್ತಿದ್ದ. ಕಳ್ಳತನ ಮಾಡಿದ ಬಳಿಕ ಆತ ಮತ್ತೆ ತನ್ನ ಸೀಟಿಗೆ ಮರಳುತ್ತಿದ್ದ. ಸಿನಿಮಾ ಮುಗಿದ ನಂತರ ಥಿಯೇಟರ್‌ನಿಂದ ಬೇಗ ಪರಾರಿಯಾಗುತ್ತಿದ್ದ. ಸಿನಿಮಾದಲ್ಲಿ ಮಗ್ನರಾಗಿದ್ದ ಜನರು ಥಿಯೇಟರ್‌ನಿಂದ ಹೊರಬಂದ ನಂತರವೇ ತಮ್ಮ ಪರ್ಸ್ ಕಳೆದುಹೋಗಿರುವುದು ತಿಳಿಯುತ್ತಿತ್ತು.
ಕೆಲ ದಿನಗಳ ಹಿಂದೆ ಅಟ್ಟಿಂಗಲ್ ಗಂಗಾ ಥಿಯೇಟರ್‌ನಲ್ಲಿ ಯುವತಿಯರು ತಮ್ಮ ಪರ್ಸ್ ಕಳೆದುಕೊಂಡಿದ್ದರು. ಅವರಿಂದ ಮಾಹಿತಿ ಪಡೆದ ನೌಕರರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ.