ಛತ್ರಪತಿ ಸಾಂಭಾಜಿನಗರ: ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಶಾಸಕ ಪ್ರಕಾಶ್ ಸೋಲಂಕೆ ಅವರಿಗೆ ಸೇರಿದ ಮನೆ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಾಠ ಮೀಸಲಾತಿ ಹೋರಾಟ ಮತ್ತು ಹೋರಾಟಗಾರ ಮನೋಜ್ ಜರಂಗೆ ಅವರ ಉಪವಾಸ ಸತ್ಯಾಗ್ರಹದ ಕುರಿತಂತೆ ಸೋಲಂಕೆ ನೀಡಿದ್ದಾರೆಂಬ ಅವಹೇಳನಕಾರಿ ಹೇಳಿಕೆ ಕುರಿತಾದ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಆ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಮಜಲ್‌ಗಾಂವ್‌ನ ಸೋಲಂಕೆ ನಿವಾಸದ ಬಳಿ ನಿಂತಿದ್ದ ಕಾರಿಗೂ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಈ ಸಂದರ್ಭ ಶಾಸಕರು ಮನೆಯಲ್ಲಿದ್ದರೇ ಎಂಬುದು ಸ್ಪಷ್ಟವಾಗಿಲ್ಲ.
'ಪ್ರಕಾಶ್ ಸೋಲಂಕೆ ಅವರದ್ದೆನ್ನಲಾದ ಆಡಿಯೊ ಹರಿದಾಡುತ್ತಿದ್ದಂತೆ ಪ್ರತಿಭಟನೆ ಭುಗಿಲೆದ್ದಿದೆ. ಸ್ಥಳೀಯವಾಗಿ ಬಂದ್‌ಗೆ ಕರೆ ನೀಡಲಾಗಿದೆ. ಶಾಸಕರ ಮನೆ ಮತ್ತು ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಕಲ್ಲು ತೂರಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಾಠ ಮೀಸಲಾತಿ ವಿಚಾರವು ಮಕ್ಕಳಾಟದಂತಾಗಿದೆ ಎಂದು ಶಾಸಕರು ಹೇಳಿದ್ದಾರೆ ಎನ್ನಲಾದ ಆಡಿಯೊ ಹರಿದಾಡುತ್ತಿದೆ. ಅಲ್ಲದೆ, ಮನೋಜ್ ಜರಂಗೆ ಅವರನ್ನು ಉದ್ದೇಶಿಸಿ, ಗ್ರಾಮ ಪಂಚಾಯಿತಿಯಲ್ಲೂ ಸ್ಪರ್ಧೆ ಮಾಡದವನು ಈಗ ಬುದ್ಧಿವಂತ ಮನುಷ್ಯನಾಗಿದ್ದಾನೆ ಎಂದೂ ಶಾಸಕರು ಹೇಳಿದ್ದಾರೆ ಎನ್ನಲಾಗಿದೆ.
ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಅಡಿಯಲ್ಲಿ ಮರಾಠರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಒತ್ತಾಯಿಸಿ ಮರಾಠ ಸಮುದಾಯವು ಪ್ರತಿಭಟನೆ ನಡೆಸುತ್ತಿದೆ.
ಅಕ್ಟೋಬರ್ 25ರಿಂದ ಎರಡನೇ ಹಂತದ ಪ್ರತಿಭಟನೆಯ ಭಾಗವಾಗಿ ಜಲ್ನಾ ಜಿಲ್ಲೆಯ ಅಂತರ್ವಾಲಿ ಸಾರಥಿ ಹಳ್ಳಿಯಲ್ಲಿ ಜರಂಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಬಳಿಕ ಪ್ರತಿಭಟನೆ ತೀವ್ರತೆ ಪಡೆಯಿತು.