ಇಂಫಾಲ್: ಮಣಿಪುರದ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಚುರಾಚಾಂದಪುರ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ಸೋಮವಾರ ಬಂದ್‌ಗೆ ಕರೆ ನೀಡಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಎನ್‌ಐಎ ಮತ್ತು ಸಿಬಿಐ ತನಿಖಾ ಸಂಸ್ಥೆಗಳು, ಅಪ್ರಾಪ್ತ ವಯಸ್ಸಿನ ಇಬ್ಬರು ಸೇರಿ ಏಳು ಮಂದಿಯನ್ನು ಬಂಧಿಸಿರುವುದನ್ನು ವಿರೋಧಿಸಿ ಕುಕಿ ಸಮುದಾಯದ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು.
ಬಂದ್ ಪರಿಣಾಮ ಸಾರ್ವಜನಿಕ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಚುರಾಚಾಂದಪುರ ಜಿಲ್ಲೆಯಲ್ಲಿ ಮಾರುಕಟ್ಟೆಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಚುರಾಚಾಂದಪುರ ಮೂಲದ ಜಂಟಿ ವಿದ್ಯಾರ್ಥಿ ಸಂಘಟನೆ (ಜೆಎಸ್‌ಬಿ) ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಗಳ ಕಾಲ ಬಂದ್‌ಗೆ ಕರೆ ನೀಡಿತ್ತು. ಅಲ್ಲದೆ, ಮಣಿಪುರದ ಮಾನ್ಯತೆ ಪಡೆದ ಆದಿವಾಸಿಗಳ ಒಕ್ಕೂಟವಾದ ಐಟಿಎಲ್‌ಎಫ್, ಬಂಧನ ವಿರೋಧಿಸಿ ಸೋಮವಾರ ಬೆಳಿಗ್ಗೆ 10ರಿಂದ ಜಿಲ್ಲೆಯಲ್ಲಿ ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿದ್ದು, ಬಂಧಿತರನ್ನು 48 ಗಂಟೆಗಳ ಒಳಗೆ ಬಿಡುಗಡೆ ಮಾಡಬೇಕೆಂದು ಗಡುವು ನೀಡಿದೆ.
ಈ ವರ್ಷ ಜುಲೈನಲ್ಲಿ ಮಣಿಪುರದ ಯುವಕ ಮತ್ತು ಬಾಲಕಿಯನ್ನು ಅಪಹರಿಸಿ ಹತ್ಯೆಗೈದ ಪ್ರಕರಣದ ಆರೋಪಿಗಳು ಬಂಧಿತರಲ್ಲಿ ಸೇರಿದ್ದಾರೆ. ಹತ್ಯೆಯಾದವರ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವುದು ಇಂಫಾಲ್ ಕಣಿವೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುವಂತೆ ಮಾಡಿದೆ. ಅಲ್ಲದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಕಾರಣವಾಯಿತು.
ಜುಲೈ 6 ರಂದು ನಾಪತ್ತೆಯಾಗಿದ್ದ 20 ವರ್ಷದ ಯುವಕ ಫಿಜಾಮ್ ಹೇಮಂಜಿತ್ ಮತ್ತು 17 ವರ್ಷದ ಬಾಲಕಿ ಹಿಜಾಮ್ ಲಿಂತೋಯಿಂಗಂಬಿ ಅವರನ್ನು ಹತ್ಯೆ ಮಾಡಲಾಗಿದ್ದು, ಇಬ್ಬರ ಶವಗಳ ಛಾಯಾಚಿತ್ರಗಳು ಸೆ. 25 ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಇದು ವಿದ್ಯಾರ್ಥಿಗಳ ಹಿಂಸಾತ್ಮಕ ಪ್ರತಿಭಟನೆಗೆ ಪ್ರಮುಖ ಕಾರಣವಾಗಿದೆ.
ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ- ಸಿಂಗ್ ಭರವಸೆ:
'ಯುವಕ ಮತ್ತು ಬಾಲಕಿಯನ್ನು ಅಪಹರಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಸಿಬಿಐ ಬಂಧಿಸಿದೆ. ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
ಮಣಿಪುರದ ಸದ್ಯದ ಜನಾಂಗೀಯ ಕಲಹದ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು, ದೇಶದ ವಿರುದ್ಧ ಯುದ್ಧ ಮಾಡಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳ ನಾಯಕತ್ವದಲ್ಲಿ ನಡೆಯುತ್ತಿರುವ ದೇಶೀಯ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿ ಚುರಾಚಾಂದಪುರದಲ್ಲಿ ಒಬ್ಬ ವ್ಯಕ್ತಿಯನ್ನು ಎನ್‌ಐಎ ಬಂಧಿಸಿದೆ ಎಂದು ಸಿಂಗ್ ಹೇಳಿದ್ದಾರೆ.