ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಗರ್ಭಗುಡಿಗೆ ದಾರಂದ ಮಹೂರ್ತ ಭಾನುವಾರ ಜರಗಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರು ತಮ್ಮ ದಿವ್ಯಹಸ್ತಗಳಿಂದ ಮುಹೂರ್ತ ನೆರವೇರಿಸಿ ಮುಂದಿನ ಕಾರ್ಯಗಳಿಗೆ ಶಿಲ್ಪಿಗಳಿಗೆ ಅನುಗ್ರಹವನ್ನಿತ್ತರು. ಶ್ರೀಕ್ಷೇತ್ರದ ಭಕ್ತಾದಿಗಳು, ಗಣ್ಯರು ಈ ಸಂದಭರ್Àದಲ್ಲಿ ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ಪೂಜಾದಿ ಕಾರ್ಯಗಳನ್ನು ನೆರವೇರಿಸಿದರು.
ಸಭಾಕಾರ್ಯಕ್ರಮ :
ಶ್ರದ್ಧಾಭಕ್ತಿಯ ಸೇವೆ ಇಲ್ಲಿ ನಿರಂತರವಾಗಿ ನಡೆಯುವುದು ಕಂಡುಬರುತ್ತಿದೆ. ದೇವಸ್ಥಾನ ನಿರ್ಮಾಣದ ಪ್ರತಿಯೊಂದು ಹಂತವೂ ಅತ್ಯಂತ ಪ್ರಧಾನವಾಗಿದೆ. ದೇವರೊಂದಿಗಿನ ಅವಿನಾಭಾವ ಸಂಬಂಧವನ್ನು ಹೊಂದಲು ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಬ್ರಹ್ಮಕಲಶಾದಿ ಕಾರ್ಯಗಳನ್ನು ಕಣ್ತುಂಬಿಕೊಳ್ಳುವ ಭಕ್ತಾದಿಗಳ ಕನಸು ಭಕ್ತಿಯ ರೂಪದಲ್ಲಿ ಇಲ್ಲಿ ಪ್ರಕಟವಾಗಿ ಜೀರ್ಣೋದ್ಧಾರ ಕಾರ್ಯಗಳು ಮುಂದುವರಿಯುತ್ತಿದೆ. ಕಾರ್ಯಕರ್ತರ ಸಂಕಲ್ಪ ಸಾಕಾರಗೊಳ್ಳಲು ದೇವತಾನುಗ್ರಹ ಲಭಿಸಲಿ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನವನ್ನು ನೀಡಿ ಅನುಗ್ರಹಿಸಿದರು.
ಹಿರಿಯರಾದ ನಾರಾಯಣ ಮಾಸ್ತರ್ ಚರ್ಲಡ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ, ಸಾಮಾಜಿಕ ಧಾರ್ಮಿಕ ಮುಂದಾಳು ಉದಯ ಚೆಟ್ಟಿಯಾರ್ ಬಜಕೂಡ್ಲು, ವಾಂತಿಚ್ಚಾಲ್ ಉಪ್ಲೇರಿ ಶ್ರೀಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಖ್ಯಾತ ಎಲುಬುತಜ್ಞ ಡಾ. ನಾಗರಾಜ ಭಟ್ ಕಾಸರಗೋಡು, ಡಾ. ಜಯಶ್ರೀ ನಾಗರಾಜ್, ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಮ ಕೆ.ಕಾರ್ಮಾರು, ವಾರ್ಡು ಜನಪ್ರತಿನಿಧಿ ಶ್ಯಾಮಪ್ರಸಾದ ಮಾನ್ಯ, ಮಹಿಳಾ ವೃಂದ, ಯುವಕವೃಂದ, ಸೇವಾಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು. ನೀರ್ಚಾಲು ಶ್ರೀಧರ್ಮಶಾಸ್ತಾ ಕುಣಿತ ಭಜನಾ ತಂಡದ ಸದಸ್ಯರಿಂದ ಕುಣಿತ ಭಜನೆ ನಡೆಯಿತು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೇವಾಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ ವಂದಿಸಿದರು.