HEALTH TIPS

ಷಟ್ಪಥ ರಾ. ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಮಂಜೇಶ್ವರದ ಹಲವು ಕುಟುಂಬಗಳಿಗೆ ಕೊಡಲಿಯೇಟು :ಸ್ಥಳೀಯ ಸಂಘಟನೆಗಳ ಬೆಂಬಲದೊಂದಿಗೆ ಕಾನೂನು ಹೋರಾಟಕ್ಕೆ ಸಿದ್ಧತೆ

              ಮಂಜೇಶ್ವರ : ತಲಪಾಡಿಯಿಂದ ಚೆಂಗಳ ತನಕ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಷಟ್ಪಥ ರಸ್ತೆಯನ್ನು ಗುತ್ತಿಗೆ ಪಡೆದಿರುವ ಯು ಎಲ್ ಸಿ ಸಿ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದ ಮಂಜೇಶ್ವರದ ಹಲವು ಕುಟುಂಬಗಳಿಗೆ ಹಾಗೂ ಕುಟುಂಬದ ಆದಾಯಕ್ಕೆ ಕತ್ತರಿಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಾಮಾಜಿಕ ಸಂಘಟನೆಗಳ ಬೆಂಬಲದೊಂದಿಗೆ ಕುಟುಂಬಗಳು ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆಯನ್ನು ನಡೆಸುತಿದ್ದಾರೆ.

           ರಾ.ಹೆದ್ದಾರಿಯ ಬದಿಗಿರುವ ಕಟ್ಟಡ ಹಾಗೂ ಮನೆಗಳನ್ನು ರಾ.ಹೆದ್ದಾರಿ ಪ್ರಾಧಿಕಾರ ವಶಕ್ಕೆ ಪಡೆಯುವಾಗ ಹಲವು ಭರವಸೆಗಳನ್ನು ನೀಡಿದ್ದರೂ ಹೇಳಿದ ಮಾತುಗಳನ್ನು ಪಾಲಿಸದೆ ನಡು ರಸ್ತೆಯಲ್ಲಿಯೇ ಕೈ ಬಿಟ್ಟಿರುವುದಾಗಿ ಕುಟುಂಬಗಳು ಆರೋಪಿಸುತ್ತಿವೆ.

            ಕೆಲವೊಂದು ಮನೆಗಳ ಎದುರು ಭಾಗಕ್ಕೆ ಮಣ್ಣುಗಳನ್ನು ಹಾಕಿ ತುಂಬಿಸಿ ಮನೆಗಳಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ. ಕೆಲವೊಂದು ಕಡೆ ಕುಟುಂಬದ ಆಧಾರವಾಗಿದ್ದ ಬಾಡಿಗೆ ಕೊಠಡಿಗಳ ಎದುರು ಭಾಗ ಮಣ್ಣು ಪೇರಿಸಲಾಗಿದ್ದು ಸಾಗಲು ದಾರಿ ಇಲ್ಲದೇ ಉಪಯೋಗ ಶೂನ್ಯವಾಗಿ ಬಿದ್ದು ಕೊಂಡಿದೆ.

            ಮಂಜೇಶ್ವರ ಉದ್ಯಾವರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ತಾಗಿಕೊಂಡಿರುವ ದಿವಂಗತ ಬಿ. ಮೊಹಮ್ಮದ್ ರವರ ಕುಟುಂಬ ವಾಸವಾಗಿರುವ ಮನೆ ಹಾಗೂ ಆ ಕುಟುಂಬದ ಜೀವನದ ಆದಾಯವಾಗಿದ್ದ ಬಾಡಿಗೆ ಕಟ್ಟಡಗಳಿಗೆ ದಾರಿ ಇಲ್ಲದಂತಾಗಿದೆ.  ಜೊತೆಯಾಗಿ ಕಟ್ಟಡಕ್ಕೆ ತಾಗಿಕೊಂಡೇ ವಿದ್ಯುತ್ ಕಂಬ ಸ್ಥಾಪಿಸಲಾಗಿದೆ. ಈ ಬಗ್ಗೆ ಕಾಮಗಾರಿ ಆರಂಭವಾಗುವ ಮೊದಲೇ ವಿಧವೆಯಾಗಿರುವ ಮೊಹಮ್ಮದ್ ರವರ ಪತ್ನಿ ಖದೀಜಾ ಬಾನು ಜಿಲ್ಲಾಧಿಕಾರಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗಳಿಗೆ ತೆರಳಿ ಸೂಕ್ತವಾದ ರೀತಿಯಲ್ಲಿ ಸಮಸ್ಯೆಯನ್ನು ಪರಿಹರಿಸುವಂತೆ ವಿನಂತಿಸಿ ಕೊಂಡಿದ್ದರು. ಇದಕ್ಕೆ ಲಿಖಿತವಾಗಿಯೇ ಅಧಿಕಾರಿಗಳು ಪ್ರತಿಕ್ರಿಯಿಸಿ ಸೂಕ್ತ ಕ್ರಮ ಕೈಗೊಂಡು ಪರಿಹಾರವನ್ನು ಒದಗಿಸಿ ಕೊಡುವುದಾಗಿ ಭರವಸೆಯನ್ನು ನೀಡಿದ್ದಾರೆನ್ನಲಾಗಿದೆ.

             ಆದರೆ ಕಾಮಗಾರಿ ಅಂತಿಮ ಘಟಕ್ಕೆ ತಲುಪಿದರೂ ಇಷ್ಟರ ತನಕ ಯಾರೂ ತಿರುಗಿಯೂ ನೋಡಿಲ್ಲವೆಂಬದಾಗಿ ವಿಧವೆಯಾದ ಖದೀಜಾ ಬಾನು ಹೇಳುತಿದ್ದಾರೆ.

                 ಅವೈಜ್ಞಾನಿಕವಾಗಿ ನಿರ್ಮಿಸಲಾದ ಚರಂಡಿಯಿಂದಾಗಿ ಮಳೆಗಾಲದಲ್ಲಿ ನೀರು ಮನೆಯೊಳಗೆ ನುಗ್ಗುತಿದ್ದು ಈ ಕುಟುಂಬ ಸಂಬಂಧಪಟ್ಟ ಅಧಿಕೃತರನ್ನು ಅಂಗಾಲಾಚಿಕೊಂಡು ವಿನಂತಿಸಿಕೊಳ್ಳುತಿದ್ದರೂ ಯಾರೂ ಇತ್ತಕಡೆ ಗಮನ ಹರಿಸುತ್ತಿಲ್ಲವೆಂಬದಾಗಿ ವಿಧವೆ ಮಹಿಳೆ ತಮ್ಮ ಗೋಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

           ಸಂಬಂಧಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸಿ ಸೂಕ್ತ ಪರಿಹಾರ ಒದಗಿಸುವಂತೆ ಕುಟುಂಬ ಆಗ್ರಹಿಸಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸ್ಥಳೀಯ ಸಾಮಾಜಿಕ ಸಂಘಟನೆಗಳ ಬೆಂಬಲದೊಂದಿಗೆ ಯು ಎಲ್ ಸಿ ಸಿ ಕಚೇರಿ ಮುಂಭಾಗದಲ್ಲಿ ನಿರಾಹಾರ ಸತ್ಯಾಗ್ರಹದಂತಹ ಪ್ರತಿಭಟನೆಗಳಿಗೆ ಮುಂದಾಗಲಿರುವುದಾಗಿ ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries