ಕಾಸರಗೋಡು: ಜಿಲ್ಲೆಯ ಪ್ರಕೃತಿ ರಮಣೀಯ ಪ್ರದೇಶ, ಸರೋವರ ಕ್ಷೇತ್ರ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ನೆಲೆನಿಂತಿರುವ ಅನಂತಪುರ ಅಕ್ಷರಶ: ದುರ್ನಾತಬೀರುವ ಪ್ರದೇಶವಾಗಿ ಬದಲಾಗಿದೆ. ಒಂದೆಡೆ ಪ್ರಾಣಿಜನ್ಯ ತ್ಯಾಜ್ಯದಿಂದ ನಿರ್ಮಾಣವಾಗುತ್ತಿರುವ ಗೊಬ್ಬರದ ಕಾರ್ಖಾನೆಯಿಂದ ಹೊರಸೂಸುವ ದುರ್ಗಂಧಯುಕ್ತ ಗಾಳಿ, ಇನ್ನೊಂದೆಡೆ ಕಾರ್ಖಾನೆಯ ಮಲಿನ ನೀರು ಆಸುಪಾಸಿನ ಜಲ ಮೂಲಗಳನ್ನು ಕಲುಷಿತಗೊಳಿಸುತ್ತಿದೆ. ಜತೆಗೆ ದೇವಸ್ಥಾನದ ಎದುರಿನ ಪ್ರಕೃತಿ ರಮಣೀಯ ಗುಡ್ಡವನ್ನು ಲ್ಯಾಟರೈಟ್ ಗಣಿಗಾರಿಕೆಗಾಗಿ ಅದ್ಯಾವುದೋ ಕಂಪೆನಿಗೆ ವಹಿಸಿಕೊಟ್ಟಿರುವುದರಿಂದ ಇಲ್ಲಿನ ಪರಿಸರ ಸಂಪೂರ್ಣ ಹಾಳಾಗುತ್ತಿದೆ.
ಕಳೆದ ಎರಡು ವರ್ಷಗಳಿಂದ ಪ್ರಾಣಿಗಳ ತ್ಯಾಜ್ಯ ಬಳಸಿ ನಿರ್ಮಾಣವಾಗುತ್ತಿರುವ ಗೊಬ್ಬರ ಕಾರ್ಖಾನೆಯಿಂದ ಅನಂತಪುರ ಆಸುಪಾಸಿನ ಜನತೆ ನೆಮ್ಮದಿ ಕಳೆದುಕೊಂಡಿದ್ದಾರೆ. ಇವರು ಕುಡಿಯುವ ನೀರೂ ಕಲುಷಿತಗೊಂಡಿದ್ದು, ಲ್ಯಾಬ್ ತಪಾಸಣೆಯಲ್ಲಿ ಕುಡಿಯಲಾಗದಷ್ಟು ಮಲಿನಗೊಂಡಿರುವ ಬಗ್ಗೆ ವರದಿ ತಿಳಿಸುತ್ತಿದೆ. ಆಸುಪಾಸಿನ ಐದು ಕಿ.ಮೀ ವ್ಯಾಪ್ತಿಯ ಕಣ್ಣೂರು, ಶಾಂತಿಪಳ್ಳ, ಕಾಮನಬಯಲು, ಸಿದ್ದಿಬಯಲು, ಪೆರ್ಣೆ ಸೇರಿದಂತೆ ವಿವಿಧ ಪ್ರದೇಶದ ಜನತೆ ದುರ್ಗಂಧಯುಕ್ತ ಕಲುಷಿತ ಗಾಳಿಯನ್ನೇ ಉಸಿರಾಡಬೇಕಾದ ದುಸ್ಥಿತಿಯಿದೆ. ಕೃಷಿಯಿಂದ ಬದುಕು ಕಟ್ಟಿಕೊಂಡಿರುವ ಇಲ್ಲಿನ ಜನತೆಗೆ ಶುದ್ಧ ಕುಡಿಯುವ ನೀರು, ಉತ್ತಮ ವಾಯು ಮರೀಚಿಕೆಯಾಗುತ್ತಿದೆ. ಒಂದೆಡೆ ದೇವಸ್ಥಾನ, ಇನ್ನೊಂದೆಡೆ ಕಣ್ಣೂರಿನ ಜುಮಾ ಮಸೀದಿ, ಕುಂಬಳೆ ಸನಿಹದ ಇಗರ್ಜಿ ವರೆಗೂ ಕಾರ್ಖಾನೆಯ ದುರ್ಗಂಧಮಯ ಗಾಳಿ ವ್ಯಾಪಿಸುತ್ತಿದೆ.
ಅನಂತಪದ್ಮನಾಭ ಸ್ವಾಮಿ ಕೆರೆಯೂ ಕಲುಷಿತ?:
ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆ ಸೇರಿದಂತೆ ಈ ಪ್ರದೇಶದ ಬಹುತೇಕ ಜಲಮೂಲ ಕಲುಷಿತಗೊಳ್ಳುತ್ತಿದೆ. ದಿನ ಬೆಳಗಾದರೆ ದುರ್ಗಂಧಮಯ ಗಾಳಿ ಸೇವನೆಯೊಂದಿಗೇ ದೇವಾಲಯದಲ್ಲಿ ಪೂಜೆ ನಡೆಸಬೇಕಾಗುತ್ತಿದೆ. ಇನ್ನು ಎತ್ತರದ ಪ್ರದೇಶದಲ್ಲಿರುವ ಕಾರ್ಖಾನೆಯಿಂದ ಹೊರ ಹರಿಯುವ ತ್ಯಾಜ್ಯಯುಕ್ತ ಮಲಿನ ನೀರು ದೇವರ ಕೆರೆ ಸೇರಿದಂತೆ ಆಸುಪಾಸಿನ ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವುದಾಗಿ ದೇವಾಲಯ ಸಿಬ್ಬಂದಿ ಅಳಲು ವ್ಯಕ್ತಪಡಿಸುತ್ತಾರೆ. ಇಷ್ಟೇ ಅಲ್ಲ, ದೇವಸ್ಥಾನ ಎದುರು ಭಾಗದ ಹಸಿರುಹೊದಿಕೆಯ ಸುಂದರ ಬೆಟ್ಟ ಲ್ಯಾಟರೈಟ್ ಗಣಿಗಾರಿಕೆಗೆ ಸಿಲುಕಿ ನಲುಗುತ್ತಿದೆ. ಬೃಹತ್ ಜೆಸಿಬಿ, ಮಣ್ಣು ಪುಡಿಗಟ್ಟುವ ರಕ್ಕಸ ಯಂತ್ರಗಳನ್ನೂ ಗುಡ್ಡದಲ್ಲಿ ಅಳವಡಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಅಗೆದು ಮಣ್ಣು ಗುಡ್ಡಹಾಕಲಾಗಿದೆ. ನಿರಂತರ ಭಾರಿಪ್ರಮಾಣದ ಲಾರಿಗಳ ಮೂಲಕ ಇಲ್ಲಿಂದ ಮಣ್ಣು ಸಾಗಾಟ ನಡೆಯುತ್ತಿದ್ದು, ಸ್ಥಳೀಯ ಜನರ ವಿರೋಧದ ಹಿನ್ನೆಲೆಯಲ್ಲಿ ಒಂದೆರಡು ದಿನದಿಂದ ತಾತ್ಕಾಲಿಕವಾಗಿ ಮಣ್ಣುಸಾಗಾಟ ನಿಲುಗಡೆಗೊಂಡಿದೆ. ಶಾಶ್ವತ ನಿಲುಗಡೆಗಾಗಿ ಜನತೆ ಹೋರಾಟಕ್ಕಿಳಿದಿದ್ದಾರೆ.
ಮುಂದುವರಿದ ಪ್ರತಿಭಟನೆ:
ಸೇವ್ ಅನಂತಪುರ ಎಂಬ ಸಮಿತಿ ರಚಿಸಿ ಇಲ್ಲಿನ ನಿವಾಸಿಗಳು ಹಗಲು, ರಾತ್ರಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ 13ನೆ ದಿನಕ್ಕೆ ಕಾಲಿರಿಸಿದೆ. ಅನಂತಪುರ ದೇವಸ್ಥಾನದ ಅನತಿ ದೂರದಲ್ಲಿ ಚಪ್ಪರ ಹಾಕಿ ಊರನಾಗರಿಕರೆಲ್ಲರೂ, ಜಾತಿ, ಮತ, ರಾಜಕೀಯ ಭೇದವಿಲ್ಲದೆ ತಮ್ಮ ಅಸ್ತಿತ್ವಕ್ಕಾಗಿ ಇಲ್ಲಿ ಧರಣಿ ನಡೆಸುತ್ತಿದ್ದಾರೆ. ಎರಡು ವರ್ಷಗಳಿಂದ ಇಲ್ಲಿನ ಜನತೆ ಈ ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದ್ದಾರೆ. ಮಾತೆತ್ತಿದರೆ ಇದು ಕೈಗಾರಿಕಾ ಅಭಿವೃದ್ಧಿ ಪ್ರಾಂಗಣ ಆಗಿದ್ದು, ಇಲ್ಲಿ ಯಾವುದೇ ಉದ್ದಿಮೆ ನಡೆಸಲು ಸರ್ಕಾರ ಬಾಧ್ಯಸ್ಥರು ಎಂಬ ರೀತಿಯಲ್ಲಿ ಅಧಿಕಾರಿಗಳೂ ದರ್ಪ ಮೆರೆಯುತ್ತಿದ್ದಾರೆ ಎಂಬುದಾಗಿ ಇಲ್ಲಿನ ಜನತೆ ತಿಳಿಸುತ್ತಾರೆ. ಸರ್ಕಾರಕ್ಕೆ ಮನವಿ ಸಲ್ಲಿಸಿ ರೋಸಿಹೋಗಿರುವ ಜನತೆ ಇಲ್ಲಿ ಅನಂತಪುರವನ್ನು ರಕ್ಷಿಸುವಂತೆ ಒತ್ತಾಯಿಸಿ ಧರಣಿಗೆ ಕುಳಿತಿದ್ದಾರೆ. ಶರೀಫ್ ಟಿ. ಕಣ್ಣೂರು ಅಧ್ಯಕ್ಷ, ಸುನಿಲ್ ಕುಮಾರ್ ಅನಂತಪುರ ಕಾರ್ಯದರ್ಶಿಯಾಗಿದ್ದು, ಹಲವು ಮಂದಿ ಸದಸ್ಯರನ್ನೊಳಗೊಂಡ ಸಮಿತಿ ಮಾಡು ಇಲ್ಲವೇ ಮಡಿ ಎಂಬ ಧೋರಣೆಯೊಂದಿಗೆ ಹೋರಾಟಕ್ಕೆ ಧುಮುಕಿದೆ. ಕಾರ್ಖಾನೆಯಿಂದ ಹೊರಸೂಸುವ ದುರ್ವಾಸನೆಗೆ ಕಡಿವಾಣ ಹಾಕಬೇಕು, ಕೊಳಚೆನೀರು ಹೊರ ಹರಿಯದಂತೆ ಕ್ರಮ ಕೈಗೊಳ್ಳಬೇಕು, ಲ್ಯಾಟಟೈಟ್ ಗಣಿಗಾರಿಕೆ ತಡೆಗಟ್ಟಬೇಕು ಎಂಬ ಬೇಡಿಕೆಯನ್ನು ಸೇವ್ ಅನಂತಪುರ ಸಮಿತಿ ಮುಂದಿಟ್ಟು ಹೋರಾಟ ನಡೆಸುತ್ತಿದೆ.
ಮಾತುಕತೆಯೂ ವಿಫಲ:
ಸೇವ್ ಅನಂತಪುರ ಸಮಿತಿ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಡೆಸಿದ ಮಾತುಕತೆಯೂ ವಿಫಲವಾಗಿದೆ. ಅಡ್ಡಗೋಡೆಯ ಮೇಲೆ ದೀಪವಿರಿಸಿದಂತೆ ಅಧಿಕಾರಿಗಳು ಮಾತನಾಡುತ್ತಿದ್ದು, ಉದ್ದಿಮೆದಾರರನ್ನು ರಕ್ಷಿಸುವ ಉದ್ದೇಶ ಮಾತ್ರ ಅಧಿಕಾರಿಗಳಲ್ಲಿ ಎದ್ದುಕಾಣುತ್ತಿರುವುದಾಗಿ ಪದಾಧಿಕಾರಿಗಳು ದೂರಿದ್ದಾರೆ. ಜಿಲ್ಲಾಧಿಕಾರಿ ಕಡೆಯಿಂದ ಸ್ಪಷ್ಟ ನಿಲುವು ವ್ಯಕ್ತವಾಗದ ಹಿನ್ನೆಲೆಯಲ್ಲಿ ಸಮಿತಿ ಹೋರಾಟ ಮುಂದುವರಿಸಲು ತೀರ್ಮಾನಿಸಿರುವುದಾಗಿಯೂ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.