ಜೈಪುರ: ರಾಜಸ್ಥಾನದಲ್ಲಿ ನಮ್ಮ ಸರ್ಕಾರವು ಜಾರಿಗೊಳಿಸುತ್ತಿರುವ ಯೋಜನೆಗಳನ್ನು ಕೇಂದ್ರ ಸರ್ಕಾರವು ಪ್ಯಾನ್ ಇಂಡಿಯಾಗೆ ಪರಿಚಯಿಸಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆಗ್ರಹಿಸಿದ್ದಾರೆ.
ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಮ್ಮ ಸರ್ಕಾರ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತಿದೆ.
'ನಾವು ಜಾರಿಗೆ ತಂದಿರುವ ಕಾನೂನುಗಳು ಇತರ ರಾಜ್ಯಗಳಲ್ಲಿಯೂ ಜಾರಿಯಾಗುತ್ತಿವೆ. ನಾವು ಇತ್ತೀಚೆಗೆ ಜಾರಿಗೆ ತಂದ ಹಳೆ ಪಿಂಚಣಿ ಯೋಜನೆ (ಒಪಿಎಸ್), ಆರೋಗ್ಯದ ಮಸೂದೆ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ರಾಜಸ್ಥಾನದ ಯೋಜನೆಗಳನ್ನು ದೇಶದ ಇತರೆ ರಾಜ್ಯಗಳಲ್ಲಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ' ಎಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯಬಿದ್ದರೆ ಹೆಚ್ಚಿನ ಜಿಲ್ಲೆಗಳನ್ನು ರಚಿಸಲಾಗುವುದು ಎಂದು ಗೆಹಲೋತ್ ಭರವಸೆ ನೀಡಿದ್ದಾರೆ.
ಈ ವರ್ಷಾಂತ್ಯಕ್ಕೆ ರಾಜಸ್ಥಾನ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಸದ್ಯ 200 ಸ್ಥಾನಗಳನ್ನು ಒಳಗೊಂಡಿರುವ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತವನ್ನು ಹೊಂದಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 100 ಸ್ಥಾನಗಳನ್ನು ಪಡೆಯುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಸ್ಪಷ್ಟ ಬಹುಮತಕ್ಕೆ 1 ಸ್ಥಾನ ಕಡಿಮೆ ಇತ್ತು. ಆದಾಗ್ಯೂ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು.