ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ನಡೆಸಿರುವ ಆಕ್ರಮಣವನ್ನು 'ಭಯೋತ್ಪಾದನಾ ದಾಳಿ' ಎಂದು ಭಾರತ ಗುರುವಾರ ಕರೆದಿದೆ.
ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ಕುರಿತು ಇದೇ ಮೊದಲ ಬಾರಿಗೆ ಭಾರತ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, 'ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಬಿಕ್ಕಟ್ಟು ಕುರಿತಂತೆ ಈ ಹಿಂದಿನಿಂದಲೂ ತಳೆದಿರುವ ನಿಲುವಿಗೆ ಭಾರತ ಬದ್ಧ' ಎಂದರು.
'ಉಭಯ ದೇಶಗಳು ಮಾತುಕತೆ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕು. ಇಸ್ರೇಲ್‌ನೊಂದಿಗೆ ಶಾಂತಿಯಿಂದ ಇರುವ ಸಾರ್ವಭೌಮ, ಸ್ವತಂತ್ರ ಹಾಗೂ ನ್ಯಾಯಬದ್ಧ ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆಯಾಗಬೇಕು ಎಂದು ಭಾರತ ಈ ಹಿಂದಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಹೇಳಿದರು.
'ಎರಡು ರಾಷ್ಟ್ರಗಳ ಸ್ಥಾಪನೆಯೇ ಈ ಬಿಕ್ಕಟ್ಟಿಗೆ ಪರಿಹಾರ' ಎಂಬ ಭಾರತದ ನಿಲುವನ್ನೂ ಅವರು ಪುನರುಚ್ಚರಿಸಿದರು.
'ಎಲ್ಲ ಬಗೆಯ ಭಯೋತ್ಪಾದಕ ಕೃತ್ಯಗಳ ವಿರುದ್ಧ ಹೋರಾಡುವುದು ಜಾಗತಿಕ ಹೊಣೆಗಾರಿಕೆಯಾಗಿದೆ. ಜೊತೆಗೆ, ಮನುಕುಲದ ಹಿತ ಬಯಸುವ ಕಾನೂನುಗಳನ್ನು ಪಾಲನೆ ಮಾಡಬೇಕಾದ ಸಾರ್ವತ್ರಿಕ ಬಾಧ್ಯತೆಯೂ ಎಲ್ಲರ ಮೇಲಿದೆ' ಎಂದು ಬಾಗ್ಚಿ ಹೇಳಿದರು.
'ಇಸ್ರೇಲ್‌ನಲ್ಲಿರುವವರ ಪೈಕಿ ತಾಯ್ನಾಡಿಗೆ ಮರಳಲು ಬಯಸುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ಕರೆ ತರುವುದರ ಮೇಲೆ ಭಾರತ ಸದ್ಯ ಗಮನ ಕೇಂದ್ರೀಕರಿಸಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.