ಇಂದೋರ್: ಹುಡುಗಿಯರು ಸಿಗರೇಟ್ ಸೇದುವುದನ್ನು ನೋಡಿ ಕೋಪಗೊಂಡ 70 ವರ್ಷದ ವ್ಯಕ್ತಿಯೊಬ್ಬ ಕೆಫೆಗೆ ಬೆಂಕಿ ಹಚ್ಚಿದ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಗುರುತಿಸಿ, ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಾಜೇಶ್ ದಂಡೋಟಿಯಾ ಅವರು ತಿಳಿಸಿದ್ದಾರೆ.
ಬಂಧಿತ ಆರೋಪಿ ದೂರಸಂಪರ್ಕ ಇಲಾಖೆಯ ನಿವೃತ್ತ ನೌಕರನಾಗಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
"ಪ್ರಾಥಮಿಕ ವಿಚಾರಣೆಯ ವೇಳೆ, ಆರೋಪಿಯು ಈ ಕೆಫೆಯಲ್ಲಿ ಹುಡುಗಿಯರು ಧೂಮಪಾನ ಮಾಡುವುದನ್ನು ತಾನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಅವರು ಸಿಗರೇಟ್ ಸೇದುವುದನ್ನು ನೋಡಿ ಕೋಪಗೊಂಡು ಬೆಂಕಿ ಹಚ್ಚಿದೆನು" ಎಂದು ಆರೋಪಿ ಹೇಳಿದ್ದಾರೆ.
ಆದರೆ ಆರೋಪಿ ಪದೇ ಪದೇ ಹೇಳಿಕೆ ಬದಲಾಯಿಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಕೆಫೆ ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
70 ವರ್ಷದ ವೃದ್ಧ ಲಸುದಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆಫೆಯ ಒಳಗೆ ಯಾರೂ ಇಲ್ಲದಿದ್ದಾಗ ಬೆಂಕಿ ಹಚ್ಚಿದ್ದು, ಕೆಫೆ ಸಂಪೂರ್ಣವಾಗಿ ಸುಟ್ಟುಹೋಗಿದೆ.