ಜಗದಲ್‌ಪುರ : ನಕ್ಸಲ್‌ವಾದವನ್ನು ಕಾಂಗ್ರೆಸ್ ಪ್ರೋತ್ಸಾಹಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಇಲ್ಲಿ ಆರೋಪಿಸಿದರು. ಅಲ್ಲದೆ ನರೇಂದ್ರಮೋದಿ ಸರ್ಕಾರದ ಒಂಬತ್ತು ವರ್ಷಗಳ ಆಡಳಿತಾವಧಿಯಲ್ಲಿ ನಕ್ಸಲರ ಹಿಂಸಾಚಾರ ಶೇ 52ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.
ಜಗದಲ್‌ಪುರ : ನಕ್ಸಲ್‌ವಾದವನ್ನು ಕಾಂಗ್ರೆಸ್ ಪ್ರೋತ್ಸಾಹಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಇಲ್ಲಿ ಆರೋಪಿಸಿದರು. ಅಲ್ಲದೆ ನರೇಂದ್ರಮೋದಿ ಸರ್ಕಾರದ ಒಂಬತ್ತು ವರ್ಷಗಳ ಆಡಳಿತಾವಧಿಯಲ್ಲಿ ನಕ್ಸಲರ ಹಿಂಸಾಚಾರ ಶೇ 52ರಷ್ಟು ಕಡಿಮೆಯಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ಛತ್ತೀಸಗಢವನ್ನು 'ಕಾಂಗ್ರೆಸ್‌ನ ಎಟಿಎಂ ಆಗಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಆಡಳಿತವು 'ಹಗರಣಗಳ ಸರ್ಕಾರ' ಎಂಬಂತಾಗಿದೆ ಎಂದರು.
ಜಗದಲ್‌ಪುರ ಮತ್ತು ಕೋಂಡಾಗಾಂವ್‌ನಲ್ಲಿ ಸಾರ್ವಜನಿಕ ರ್‍ಯಾಲಿಗಳಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ರಾಜ್ಯವನ್ನು ನಕ್ಸಲ್ ಪಿಡುಗು ಮುಕ್ತ ಮಾಡುವುದಾಗಿ ತಿಳಿಸಿದರು.
'ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಿ. ಹಗರಣಗಳನ್ನು ಮಾಡುವ ಮೂಲಕ ಬುಡಕಟ್ಟು ಜನರ ಹಣವನ್ನು ಲಪಟಾಯಿಸುವವರನ್ನು ತಲೆಕೆಳಗಾಗಿ ನೇತು ಹಾಕುತ್ತೇವೆ' ಎಂದರು.
ಕಾಂಗ್ರೆಸ್ ಇಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕಳುಹಿಸಿರುವ ಹಣವು ಕಾಂಗ್ರೆಸ್‌ನ ಎಟಿಎಂ ಮೂಲಕ ದೆಹಲಿಗೆ ವರ್ಗಾವಣೆಯಾಗುತ್ತದೆ ಎಂದು ಟೀಕಿಸಿದರು.
ಛತ್ತೀಸಗಢದ ಜನರು ಮೂರು ಬಾರಿ ದೀಪಾವಳಿ ಆಚರಿಸುತ್ತಾರೆ. ಹಬ್ಬದ ದಿನ, ಡಿ.3ರಂದು ಬಿಜೆಪಿ ಗೆಲುವು ಸಾಧಿಸಿದಾಗ ಮತ್ತು ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಂಡಾಗ ದೀಪಾವಳಿ ಆಚರಿಸಲಿದ್ದಾರೆ ಎಂದರು.
'ಭೂಪೇಶ್ ಬಘೆಲ್ ಸರ್ಕಾರ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆದು ₹ 2000 ಕೋಟಿ ಹಗರಣ ಮಾಡಿದೆ. ಕಲ್ಲಿದ್ದಲು ಸಾಗಣೆ ಹಗರಣ, ಮಹದೇವ್ ಬೆಟ್ಟಿಂಗ್ ಆಯಪ್ ಹಗರಣ, ಅಕ್ಕಿ ವಿತರಣೆ ಹಗರಣವನ್ನೂ ನಡೆಸಿದೆ ಎಂದರು.
'ಅನೇಕ ಹಗರಣಗಳ ಬಗ್ಗೆ ಕೇಳಿದ್ದೇನೆ. ಆದರೆ ವ್ಯಕ್ತಿಯೊಬ್ಬರು ಸಗಣಿ ಖರೀದಿ ಯೋಜನೆಯಲ್ಲಿ ₹ 1300 ಕೋಟಿ ಹಗರಣ ಎಸಗಿದ್ದಾರೆ ಎಂಬಂತಹದ್ದನ್ನು ಕೇಳಿರಲಿಲ್ಲ' ಎಂದು ಹೇಳಿದರು.
ಕೋಂಡಾಗಾಂವ್‌ನಲ್ಲಿ ರ್‍ಯಾಲಿಯಲ್ಲಿ ಮಾತನಾಡಿ, ಬುಡಕಟ್ಟು ಜನರನ್ನು ಕಾಂಗ್ರೆಸ್ ಮತಬ್ಯಾಂಕ್‌ನಂತೆ ನೋಡುತ್ತಿದೆ. ಬುಡಕಟ್ಟು ಜನರ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದರು.
2018ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೇ ಸ್ಥಳದಲ್ಲಿ ಭರವಸೆಗಳನ್ನು ನೀಡಿದ್ದರು. ಆದರೆ ಅದನ್ನು ಈಡೇರಿಸಲಿಲ್ಲ ಎಂದು ಟೀಕಿಸಿದರು.