HEALTH TIPS

ಭಾರತೀಯ ಸೇನೆಯ 'ಉದ್ಭವ್‌'ಗೆ ರಾಜನಾಥ್‌ ಸಿಂಗ್‌ ಚಾಲನೆ

              ವದೆಹಲಿ: ದೇಶ‌ದಲ್ಲಿ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಯುದ್ಧ ತಂತ್ರಗಾರಿಕೆಗಳನ್ನು ಪರಿಶೋಧಿಸಿ ಅವುಗಳನ್ನು ಸೇನೆಗೆ ಅಳವಡಿಸುವ ಮೂಲಕ ಭದ್ರತಾ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಿ, ಆ ಮೂಲಕ ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ 'ಉದ್ಭವ್‌' ಯೋಜನೆಯನ್ನು ಭಾರತೀಯ ಸೇನೆ ಶನಿವಾರ ಆರಂಭಿಸಿದೆ.

            ಈ ಯೋಜನೆಗೆ ಚಾಲನೆ ನೀಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಮಹಾಭಾರತ, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಕಾಮಂಡಕಿಯ ನೀತಿಸಾರದಿಂದ ಹೆಕ್ಕಿ ತೆಗೆದ 75 ತಂತ್ರಗಳನ್ನು ಈ ಉದ್ಭವ್‌ ಪ್ರಾಜೆಕ್ಟ್‌ನಲ್ಲಿ ಸೇನಾ ತರಬೇತಿ ಕಮಾಂಡ್‌ ಅಳವಡಿಸಿಕೊಂಡಿದೆ ಎಂದು ಹೇಳಿದರು.

              'ಅಹೋಮ್ ಸಾಮ್ರಾಜ್ಯವು 600 ವರ್ಷಗಳ ಕಾಲ ಯಶಸ್ವಿಯಾಗಿ ಆಳ್ವಿಕೆ ನಡೆಸಿದ, ಪದೇ ಪದೇ ಮೊಘಲರನ್ನು ಸೋಲಿಸಿದ ನಿದರ್ಶನವನ್ನು ನಾವು ಹೊಂದಿದ್ದೇವೆ' ಎಂದು 'ಉದ್ಭವ್‌ ಪ್ರಾಜೆಕ್ಟ್‌' ಉಪಕ್ರಮ ಮುನ್ನಡೆಸುತ್ತಿರುವ ಸೇನಾ ಉಪ ಮುಖ್ಯಸ್ಥ (ತಂತ್ರಗಾರಿಕೆ) ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್ ತಿಳಿಸಿದರು.

                 ದೇಶದ ಶ್ರೀಮಂತ ಸೇನಾ ಸಂಸ್ಕೃತಿ ಮತ್ತು ಪರಂಪರೆಯ ಆಚರಣೆಗೆ ಅದರಲ್ಲೂ ರಾಷ್ಟ್ರದ ಭದ್ರತೆಯಲ್ಲಿ ಸಶಸ್ತ್ರ ಪಡೆಗಳು ತೋರಿದ 'ಅಸಾಧಾರಣ ಶೌರ್ಯ' ಪರಿಚಯಿಸಲು ದೆಹಲಿಯಲ್ಲಿ ಆಯೋಜಿಸಿದ ಭಾರತೀಯ ಮಿಲಿಟರಿ ಪರಂಪರೆ ಉತ್ಸವದ ಮೊದಲ ಆವೃತ್ತಿಯನ್ನು ರಾಜನಾಥ್‌ ಸಿಂಗ್ ಇದೇ ವೇಳೆ ಉದ್ಘಾಟಿಸಿದರು.

              'ಕಳೆದ ಕೆಲವು ದಶಕಗಳಲ್ಲಿ ದೇಶದ ಭದ್ರತೆಯಲ್ಲಿ ಸಶಸ್ತ್ರ ಪಡೆಗಳು ತೋರಿದ ಅಸಾಧಾರಣ ಶೌರ್ಯ ಮತ್ತು ಅಮೂಲ್ಯ ಪಾತ್ರವನ್ನು ಪ್ರದರ್ಶಿಸುವ ಭಾರತೀಯ ಮಿಲಿಟರಿ ಪರಂಪರೆ ಉತ್ಸವವು ರಾಷ್ಟ್ರದ ಯುವಜನರಿಗೆ ಸ್ಫೂರ್ತಿ ನೀಡುತ್ತದೆ. ಇದು ಭಾರತೀಯ ಸೇನೆ ಮತ್ತು ಯೋಧರ ಶೌರ್ಯದ ಯಶೋಗಾಥೆಗಳ ಬಗ್ಗೆ ಇನ್ನಷ್ಟು ತಿಳಿಯಲು ಪ್ರೇರಣೆಯಾಗಲಿದೆ' ಎಂದು ಅವರು ತಿಳಿಸಿದರು.

ದೇಶದ ಸೇನಾ ಇತಿಹಾಸದಲ್ಲಿನ ಆಯ್ದ ಮೈಲಿಗಲ್ಲುಗಳು ಮತ್ತು ಸಾಧನೆಗಳನ್ನು ಬಿಂಬಿಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆರಿಟೇಜ್ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಲಾಗಿದೆ.

                                            ಏನಿದು ಉದ್ಭವ್‌ ಪ್ರಾಜೆಕ್ಟ್‌

                           ಭಾರತೀಯ ಸೇನೆ ಮತ್ತು ಯುನೈಟೆಡ್ ಸರ್ವಿಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜಂಟಿ ಸಹಭಾಗಿತ್ವದಲ್ಲಿ 'ಪ್ರಾಜೆಕ್ಟ್ ಉದ್ಭವ್' ಯೋಜನೆ ಜಾರಿಗೆ ತರಲಾಗಿದೆ.

                ಈ ಪ್ರಾಜೆಕ್ಟ್‌ನಡಿ, ಚಾಣಕ್ಯನ ಅರ್ಥಶಾಸ್ತ್ರದಿಂದ ಹಿಡಿದು ತಿರುವಳ್ಳುವರ್ ಕವಿ ರಚಿಸಿದ ಶಾಸ್ತ್ರೀಯ ತಮಿಳು ಗ್ರಂಥ 'ತಿರುಕ್ಕುರಳ್‌' ಗ್ರಂಥದವರೆಗಿನ ಭಾರತೀಯ ಮಿಲಿಟರಿ ಜ್ಞಾನದ ದೊಡ್ಡ ಭಂಡಾರ ಮತ್ತು ಚಂದ್ರಗುಪ್ತ ಮೌರ್ಯ, ಅಶೋಕ, ಚೋಳ ಸಾಮ್ರಾಜ್ಯಗಳ ಕಾಲದ ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳನ್ನು ಪರಿಶೋಧಿಸಿ, ಆ ಕಾಲದ ಯುದ್ಧ ತಂತ್ರಗಳನ್ನು ಆಧುನಿಕ ಭದ್ರತಾ ಸವಾಲುಗಳಿಗೆ ತಕ್ಕಂತೆ ಈಗಿನ ಸೇನೆಗೆ ಅಳವಡಿಸುವುದಾಗಿದೆ.

                  'ಸಮಕಾಲೀನ ಭಾರತೀಯ ಸೇನೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ, ಸೇನೆಗೆ ಸಮಕಾಲೀನ ಯುದ್ಧ ಕೌಶಲ ಮತ್ತು ರಾಜತಾಂತ್ರಿಕತೆಯ ಅಗತ್ಯಗಳನ್ನು ಹೊಂದಲು 'ಉದ್ಭವ್ ಪ್ರಾಜೆಕ್ಟ್‌' ವೇದಿಕೆಯಾಗಲಿದೆ' ಎಂದು ರಕ್ಷಣಾ ಸಚಿವಾಲಯ ಹೇಳಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries