ನವದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ಬೇಕಾಗಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಸಂಘಟನೆಯ ಉಗ್ರನನ್ನು ಭಯೋತ್ಪಾದಕ ನಿಗ್ರಹ ದಳ ಸೋಮವಾರ ಬಂಧಿಸಿದೆ.
ಬಂಧಿತನನ್ನು ಶಹನವಾಜ್ ಅಲಿಯಾಸ್ ಶಫಿ ಉಝಮಾ ಎಂದು ಗುರುತಿಸಲಾಗಿದೆ. ಈತನ ಶೋಧಕ್ಕೆ ದೆಹಲಿ ಪೊಲೀಸರ ವಿಶೇಷ ತಂಡ, ಎನ್‌ಐಎ ಹಾಗೂ ಇನ್ನಿತರ ತಂಡಗಳು ಜತೆಗೂಡಿದ್ದವು.
ವೃತ್ತಿಯಿಂದ ಎಂಜಿನಿಯರ್ ಆದ ಶಹನವಾಜ್ ಮೂಲತಃ ದೆಹಲಿಯವನು. ಈ ಮೊದಲು ಪುಣೆಯಲ್ಲಿ ಈತನನ್ನು ಬಂಧಿಸಲಾಗಿತ್ತು. ಆದರೆ ಆಗ ತಪ್ಪಿಸಿಕೊಂಡಿದ್ದ. ನಂತರ ಈತ ದೆಹಲಿಗೆ ಪರಾರಿಯಾಗಿ, ಅಲ್ಲಿಯೇ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಶಹನವಾಜ್‌ನೊಂದಿಗೆ ರಿಜ್ವಾನ್ ಅಬ್ದುಲ್ ಹಾಜಿ ಅಲಿ, ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡೈಪರ್‌ವಾಲಾ ಹಾಗೂ ತಲ್ಹಾ ಲಿಯಾಕತ್ ಖಾನ್ ಈತರ ಶಂಕಿತರ ಕುರಿತ ಮಾಹಿತಿ ನೀಡಿದವರಿಗೆ ₹3 ಲಕ್ಷ ಬಹುಮಾನವನ್ನು ಈತ್ತೀಚೆಗೆ ಎನ್‌ಐಎ ಘೋಷಿಸಿತ್ತು.
ಮಹಾರಾಷ್ಟ್ರದ ಪುಣೆಯಲ್ಲಿ ಐಎಸ್‌ಐಎಸ್ ಉಗ್ರರ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ಈ ನಾಲ್ವರೂ ಹತರಾಗಿದ್ದರು ಎಂದೇ ಹೇಳಲಾಗುತ್ತಿತ್ತು. ₹ 2.5 ಕೋಟಿ ಮೊತ್ತದ ಹೆರಾಯನ್ ಮಾರಾಟ ಜಾಲದ ಮೇಲೆ ದೆಹಲಿ ಪೊಲೀಸ್‌ನ ವಿಶೇಷ ದಳ ಮೂವರನ್ನು ಬಂಧಿಸಿತ್ತು.
ಇದಕ್ಕೂ ಮೊದಲು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಬಂಧಿತ ಶಾಮಿಲ್ ಸಿಖಿದ್ ನಚನ್ ಎಂಬಾತನ ಸ್ಫೋಟಕ ಮಾಹಿತಿ ಹೊರಹಾಕಿದ್ದ. ದೇಶದಲ್ಲಿ ಅಶಾಂತಿ ಸೃಷ್ಟಿಸಿ, ಅದರ ಲಾಭ ಪಡೆಯುವ ಯೋಜನೆನ್ನು ಉಗ್ರರು ರೂಪಿಸಿದ್ದರು. ಸುಧಾರಿತ ಸ್ಫೋಟಕಗಳನ್ನು ಅಲ್ಲಲ್ಲಿ ಇಡುವುದು ಇವರ ಯೋಜನೆಯಾಗಿತ್ತು ಎಂಬುದು ತಿಳಿಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಶಂಕಿತರು ಐಎಸ್‌ಐಎಸ್ ಸ್ಲೀಪರ್ ಸೆಲ್ ಸದಸ್ಯರಾಗಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಯುದ್ಧ ಘೋಷಿಸುವುದು ಹಾಗೂ ಐಎಸ್‌ಐಎಸ್ ಕಾರ್ಯಸೂಚಿಯಂತೆ ದೇಶದಲ್ಲಿ ಭಯೋತ್ಪಾದನೆ ಮತ್ತು ಹಿಂಸೆಯನ್ನು ವಿಸ್ತರಿಸುವುದು ಇವರ ಉದ್ದೇಶವಾಗಿತ್ತು ಎಂದು ಎನ್‌ಐಎ ಹೇಳಿದೆ.