ಲೆಬನಾನ್: ಇಸ್ರೇಲ್ ರಕ್ಷಣಾ ಪಡೆಗಳಿಗೆ ಉಚಿತ ಆಹಾರ ನೀಡಿದ ಇಸ್ರೇಲ್‌ನ ಮೆಕ್‌ಡೊನಾಲ್ಡ್ ಫ್ರಾಂಚೈಸಿಯ ನಡೆ ವಿರುದ್ಧ ಮುಸ್ಲಿಂ ರಾಷ್ಟ್ರಗಳಲ್ಲಿ ಬಲವಾದ ವಿರೋಧ ವ್ಯಕ್ತವಾಗಿದ್ದು, ಮೆಕ್‌ಡೊನಾಲ್ಡ್ ಬಹಿಷ್ಕರಿಸುವಂತೆ ಕರೆ ನೀಡಿವೆ.
ಕಳೆದ ವಾರ ಮೆಕ್‌ಡೊನಾಲ್ಡ್‌ನ ಇಸ್ರೇಲ್ ಫ್ರಾಂಚೈಸಿಯು ಸೈನಿಕರಿಗೆ ಉಚಿತ ಆಹಾರ ರವಾನೆ ಮಾಡಿರುವ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿತ್ತು.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪಾಕಿಸ್ತಾನ, ಅರಬ್ ದೇಶಗಳನೊಳಗೊಂಡತೆ ಹಲವಾರು ಮುಸ್ಲಿಂ ದೇಶಗಳು ಮೆಕ್‌ಡೊನಾಲ್ಡ್ ಆಹಾರ ಪದಾರ್ಥಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿವೆ. ಪಾಕಿಸ್ತಾನದಲ್ಲಿ 'ಬಾಯ್ಕಾಟ್ ಮೆಕ್‌ಡೊನಾಲ್ಡ್' ಎಕ್ಸ್‌ನಲ್ಲಿ ಟ್ರೆಂಡ್ ಆಗಿತ್ತು.
'ಈ ಕಷ್ಟದ ಸಂದರ್ಭದಲ್ಲಿ ನಾವು ಪ್ಯಾಲೆಸ್ಟೀನ್‌ಯರ ಜೊತೆ ನಿಲ್ಲಬೇಕಿದೆ. ಇಸ್ರೇಲ್ ಸೈನಿಕರಿಗೆ ಉಚಿತ ಆಹಾರಗಳನ್ನು ರವಾನಿಸುತ್ತಿರುವ ಕಂಪನಿಗಳ ಆಹಾರಗಳ ಪದಾರ್ಥಗಳನ್ನು ನಾವು ಖರೀದಿಸುವುದಿಲ್ಲ ಎಂದು ಶಪಥ ಮಾಡೋಣ' ಎಂದು ಪಾಕಿಸ್ತಾನದ ವಿದ್ಯಾರ್ಥಿ ಸಂಘಟನೆಯೊಂದು ಬರೆದುಕೊಂಡಿದೆ.
ಲೆಬನಾನ್‌ನಲ್ಲಿರುವ ಮೆಕ್‌ಡೊನಾಲ್ಡ್ ಔಟ್‌ಲೆಟ್ ಮೇಲೆ ಪ್ಯಾಲೆಸ್ಟೀನ್ ಪರ ಗುಂಪೊಂದು ದಾಳಿ ಮಾಡಿದೆ ಎಂದು ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ನಡುವೆ ಹೇಳಿಕೆ ಬಿಡುಗಡೆ ಮಾಡಿರುವ ಮೆಕ್‌ಡೊನಾಲ್ಡ್‌ನ ಲೆಬನಾನ್ ಫ್ರಾಂಚೈಸಿ , 'ಇಸ್ರೇಲ್ ಫ್ರಾಂಚೈಸಿ ತೆಗೆದುಕೊಂಡ ನಿರ್ಧಾರಗಳಿಗೂ ನಮಗೂ ಸಂಬಂಧವಿಲ್ಲ. ದೇಶದ ಗೌರವ ಮತ್ತು ಒಗ್ಗಟ್ಟಿಗೆ ನಾವು ಬದ್ದರಾಗಿದ್ದೇವೆ' ಎಂದು ಹೇಳಿದೆ.
ಟರ್ಕಿ, ಕುವೈತ್, ಒಮನ್, ಯುಎಇ ಅಲ್ಲಿರುವ ಮೆಕ್‌ಡೊನಾಲ್ಡ್‌ನ ಫ್ರಾಂಚೈಸಿಗಳು ಕೂಡ ಇಂತಹದೇ ಹೇಳಿಕಗಳನ್ನು ಬಿಡುಗಡೆ ಮಾಡಿವೆ. 'ಇಸ್ರೇಲ್ ಫ್ಯಾಂಚೈಸಿ ತೆಗೆದುಕೊಂಡ ನಿರ್ಧಾರ ವೈಯಕ್ತಿಕವಾಗಿದ್ದು, ಇತರ ದೇಶಗಳ ಫ್ರಾಂಚೈಸಿಗಳು ಈ ನಿರ್ಧಾರಕ್ಕೆ ಅನುಮೋದನೆ ನೀಡಿಲ್ಲ' ಎಂದು ಹೇಳಿವೆ.
ಫಾಸ್ಟ್ ಫುಡ್ ವಿತರಿಸುವ ಅಮೆರಿಕ ಮೂಲದ 'ಮೆಕ್‌ಡೊನಾಲ್ಡ್', ಪ್ರಪಂಚದಾದ್ಯಂತ ಹಲವು ಔಟ್‌ಲೆಟ್‌ಗಳನ್ನು ಹೊಂದಿದೆ.