ಜೆರುಸಲೇಂ: ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಆರಂಭಿಸಿದ್ದು, ಮೊದಲ ಚಾರ್ಟರ್ ಫ್ಲೈಟ್ ಗುರುವಾರ ರಾತ್ರಿ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಡಲಿದೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್‌ನಲ್ಲಿ ನೆಲೆಸಿರುವ ಸುಮಾರು 230 ಭಾರತೀಯರನ್ನು ಹೊತ್ತ ಮೊದಲ ವಿಮಾನ ಇಂದು ರಾತ್ರಿ 9 ಗಂಟೆಗೆ ಟೇಕಾಫ್ ಆಗಲಿದೆ. "ಮೊದಲಿಗೆ ಬಂದವರಿಗೆ ಮೊದಲು ಸೇವೆ" ಆಧಾರದ ಮೇಲೆ ಅವರು ಭಾರತಕ್ಕೆ ತೆರಳಲಿದ್ದಾರೆ ಎಂದು ಬಲ್ಲ ಮೂಲಗಳು ಪಿಟಿಐಗೆ ತಿಳಿಸಿವೆ.
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ನಂತರ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಏರ್ ಇಂಡಿಯಾ ತನ್ನ ಹಾರಾಟವನ್ನು ತಕ್ಷಣವೇ ಸ್ಥಗಿತಗೊಳಿಸಿದ್ದು, ಹಲವು ಭಾರತೀಯರು ದೇಶಕ್ಕೆ ಮರಳು ಸಾಧ್ಯವಾಗದೇ ಇಸ್ರೇಲ್ ನಲ್ಲಿ ಸಿಲುಕಿದ್ದಾರೆ.
ಆಪರೇಷನ್ ಅಜಯ್ ಅಡಿ ಇಸ್ರೇಲ್ ನಿಂದ ದೇಶಕ್ಕೆ ವಾಪಸಾಗುತ್ತಿರುವ ಭಾರತೀಯರು ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ ಮತ್ತು ಅವರ ಪ್ರಯಾಣದ ವೆಚ್ಚವನ್ನು ಸರ್ಕಾರ ಭರಿಸುತ್ತಿದೆ.