ಹೈದರಾಬಾದ್: 'ತೆಲಂಗಾಣವು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವನ್ನು ಹೊಂದಿದೆ' ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ ಬಿಆರ್‌ಎಸ್ ಪಕ್ಷದ ನಾಯಕಿ ಕೆ.ಕವಿತಾ, 'ಕೇಂದ್ರ ಸರ್ಕಾರದ ಸಮೀಕ್ಷಾ ವರದಿ ಪ್ರಕಾರ ತೆಲಂಗಾಣ ದೇಶದಲ್ಲೇ ಕಡಿಮೆ ಭ್ರಷ್ಟಾಚಾರವನ್ನು ಹೊಂದಿದ ರಾಜ್ಯವಾಗಿದೆ' ಎಂದಿದ್ದಾರೆ.
ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಕವಿತಾ, ರಾಹುಲ್ ಗಾಂಧಿ ವಿರುದ್ಧ ಮಾತಿನ ಪ್ರಹಾರ ಮಾಡಿದ್ದಾರೆ. 'ಅವರು(ರಾಹುಲ್ ಗಾಂಧಿ) ಒಬ್ಬ ನಾಯಕನಲ್ಲ. ತನಗೆ ಕೊಡುವ ಯಾವುದೇ ಸ್ಕ್ರಿಪ್ಟ್‌ಗಳನ್ನು ಹಿಡಿದು ಓದುದಷ್ಟೇ ಅವರ ಕೆಲಸ. ರಾಹುಲ್ ಅವರೇ ಯಾವುದೇ ರಾಜ್ಯದ ಚುನಾವಣಾ ರ್‍ಯಾಲಿಗೆ ಹೋಗುವ ಮುನ್ನ ಸ್ವಲ್ಪ ಹೋಮ್ ವರ್ಕ್ ಮಾಡಿ ಬನ್ನಿ' ಎಂದು ಸಲಹೆ ನೀಡಿದರು.
'ಚಂದ್ರಶೇಖರ್ ರಾವ್ ಒಬ್ಬ ಸಾಮಾನ್ಯ ನಾಯಕನಲ್ಲ. ತಳಮಟ್ಟದಿಂದ ಬಂದ ಅವರು ಚಳುವಳಿಗಳ ಮೂಲಕ ನಾಯಕರಾಗಿದ್ದಾರೆ. ಒಂದು ಪ್ರದೇಶದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬಲ್ಲ ಸಾಮರ್ಥ್ಯ ಅವರಿಗಿದೆ' ಎಂದು ತಮ್ಮ ತಂದೆ, ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಹೊಗಳಿದ್ದಾರೆ.
'ರಾಜ್ಯದಲ್ಲಿ ಹೂಡಿಕೆ ಮಾಡುವುದರ ಕುರಿತು ಬಿಆರ್‌ಎಸ್ ಸರ್ಕಾರ ತನ್ನ ಚಿಂತನೆಯನ್ನು ಕೇಂದ್ರಿಕರಿಸಿದೆ. ರಾಜ್ಯದಲ್ಲಿ ಉದ್ಯೋವಕಾಶಗಳನ್ನು ಹೆಚ್ಚಿಸುವುದರ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ದಿ ಮಾಡುವುದು ಪಕ್ಷದ ಗುರಿಯಾಗಿದೆ. ರಾಜ್ಯದ ಜಿಎಸ್‌ಡಿಪಿ ಕೂಡ ಹೆಚ್ಚಿದೆ' ಎಂದರು.