ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಉದ್ರಿಕ್ತಗೊಂಡ ಗುಂಪೊಂದು ಹಿಂಸಾಚಾರ ನಡೆಸಿದ ನಂತರ ನಿಷೇಧಾಜ್ಞೆ ಜಾರಿಗೊಳಿಸಿರುವ ಶಿವಮೊಗ್ಗ ನಗರದ ರಾಗಿ ಗುಡ್ಡ ಪ್ರದೇಶದಲ್ಲಿ ಪರಿಸ್ಥಿತಿ ಈಗ ಶಾಂತಿಯುತವಾಗಿದ್ದು, ನಿಯಂತ್ರಣದಲ್ಲಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಕಲ್ಲು ತೂರಾಟದ ಘಟನೆ ನಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಘಟನೆಯಲ್ಲಿ ಪೊಲೀಸರು ಸೇರಿದಂತೆ ಕೆಲವರಿಗೆ ಗಾಯಗಳಾಗಿದ್ದು, ಕೆಲವು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಗಾಯಗಳು ಮತ್ತು ಆಸ್ತಿ ಹಾನಿಗೊಳಗಾದವರಿಗೆ ದೂರು ಸಲ್ಲಿಸಲು ಹೇಳಿದ್ದೇವೆ. ಘಟನೆಯಲ್ಲಿ ಭಾಗಿಯಾದ ಕೆಲವರನ್ನು ನಾವು ಈಗಾಗಲೇ ರಕ್ಷಿಸಿದ್ದೇವೆ. ವೀಡಿಯೋಗ್ರಫಿ, ಸಿಸಿಟಿವಿ ಕ್ಯಾಮೆರಾ ಮತ್ತು ಡ್ರೋನ್ ಕ್ಯಾಮರಾ ಪರಿಶೀಲಿಸುತ್ತಿದ್ದು, ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ), ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್‌ಎಎಫ್) ಒಂದು ತುಕಡಿ, 900 ಗೃಹ ರಕ್ಷಕರು, 2,000 ಪೊಲೀಸ್ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಸಾಕಷ್ಟು ಸಿಬ್ಬಂದಿ ನಿಯೋಜಿಸಲಾಗಿದ್ದು, ''ಸಾಕಷ್ಟು ಬಂದೋಬಸ್ತ್ ಮಾಡಿದ್ದೇವೆ. ಶಿವಮೊಗ್ಗ ನಗರದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಮತ್ತು ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಅವರು ಹೇಳಿದರು, ಯಾವುದೇ ವದಂತಿಗಳಿಗೆ ಜನರು ಕಿವಿಗೊಡಬೇಡಿ ಎಂದು ಮನವಿ ಮಾಡಿದರು.