ಗಾಜಾ ಪಟ್ಟಿ: ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹಮಾಸ್ ಬಂಡುಕೋರ ಸಂಘಟನೆಯ ಸಶಸ್ತ್ರ ವಿಭಾಗದ ಪ್ರಮುಖ ಅಯ್ಮಾನ್ ನೊಫಾಲ್ 'ಅಬು ಅಹ್ಮದ್' ಮೃತಪಟ್ಟಿದ್ದಾನೆ.
ಈತ ಅಲ್ ಕಸ್ಸಾಂ ಬ್ರಿಗೇಡ್ಸ್‌ನ ಕೇಂದ್ರ ಬ್ರಿಗೇಡ್‌ನ ಕಮಾಂಡರ್ ಆಗಿದ್ದ. ಹಮಾಸ್ ಸಂಘಟನೆಯ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಈತನೂ ಒಬ್ಬ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.
ಈತ ಹಮಾಸ್‌ನ ಮಿಲಿಟರಿ ಗುಪ್ತಚರ ವಿಭಾಗದಲ್ಲಿ ಈ ಮೊದಲು ಮುಖ್ಯಸ್ಥನಾಗಿದ್ದ. ಶಸ್ತ್ರಾಸ್ತ್ರಗಳ ತಯಾರಿಕೆ ಹಾಗೂ ಇಸ್ರೇಲ್‌ನತ್ತ ರಾಕೆಟ್ ದಾಳಿ ನಡೆಸುವುದರಲ್ಲಿ ಭಾಗಿಯಾಗಿದ್ದ.
ಹಮಾಸ್‌ನ ಇನ್ನೊಬ್ಬ ಮುಖಂಡ ಒಸಾಮಾ ಮಜಿನಿ ಎಂಬುವನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಹೇಳಿದೆ. ಆದರೆ ಈ ಬಗ್ಗೆ ಹಮಾಸ್ ಪ್ರತಿಕ್ರಿಯಿಸಿಲ್ಲ.
ಟೆಲ್ ಅವೀವ್ (ಎಎಫ್‌ಪಿ): ಹಮಾಸ್ ಬಂಡುಕೋರರ ವಶದಲ್ಲಿ ಇರುವ ಮಹಿಳೆ ಮಿಯಾ ಶೆಮ್ ಅವರ ತಾಯಿ ಕೆರೆನ್ ಶೆಮ್ ಅವರು ತಮ್ಮ ಮಗಳನ್ನು ಬಂಡುಕೋರರ ವಶದಿಂದ ಬಿಡಿಸಿಕೊಡಬೇಕು ಎಂದು ವಿಶ್ವದ ಪ್ರಮುಖ ದೇಶಗಳ ನಾಯಕರಲ್ಲಿ ಮನವಿ ಮಾಡಿದ್ದಾರೆ.
ಮಿಯಾ ಅವರ ತಮ್ಮ ವಶದಲ್ಲಿ ಇರುವ ವಿಡಿಯೊ ಒಂದನ್ನು ಬಂಡುಕೋರರು ಬಿಡುಗಡೆ ಮಾಡಿದ್ದಾರೆ. 'ನನ್ನ ಮಗಳು ಹಾಗೂ ಎಲ್ಲ ಒತ್ತೆಯಾಳುಗಳನ್ನು ಸೆರೆಯಿಂದ ಬಿಡಿಸಬೇಕು' ಎಂದು ಕೆರೆನ್ ಅವರು ಮನವಿ ಮಾಡಿದ್ದಾರೆ.
ಮಿಯಾ ಅವರ ಗಾಯಕ್ಕೆ ಚಿಕಿತ್ಸೆ ನೀಡುತ್ತಿರುವ ದೃಶ್ಯವು ಹಮಾಸ್ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಇದೆ. ಗಾಜಾ ಪಟ್ಟಿಯ ಗಡಿಗೆ ಸಮೀಪದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಮಿಯಾ ಭಾಗಿಯಾಗಿದ್ದರು. ಅಲ್ಲಿಗೆ ದಾಳಿ ನಡೆಸಿದ್ದ ಹಮಾಸ್, ಮಿಯಾ ಅವರನ್ನು ಹೊತ್ತೊಯ್ದಿದೆ.