ನವದೆಹಲಿ: ಸಣ್ಣ ವಾಹನಗಳಿಗೆ ಟೋಲ್ ಪಾವತಿಯಿಂದ ಮುಕ್ತಿಕೊಡಿಸಲು ತಮ್ಮ ಕಾರ್ಯಕರ್ತರು ನಡೆಸಲು ಮುಂದಾಗಿರುವ ಹೋರಾಟವನ್ನು ಹತ್ತಿಕ್ಕಿದರೆ, ಟೋಲ್ ಬೂತ್ ಗಳಿಗೆ ಬೆಂಕಿ ಹಚ್ಚಲಾಗುವುದು ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟೋಲ್ ಬೂತ್ ಗಳು ರಾಜ್ಯದಲ್ಲಿರುವ ರಾಜಕಾರಣಿಗಳಿಗೆ ಜೀವನೋಪಾಯದ ಮಾರ್ಗವಾಗಿದೆ ಎಂದು ಆರೋಪಿಸಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ನಾನು ಸಿಎಂ ಶಿಂಧೆ ಭೇಟಿಗೆ ಸಮಯ ಕೇಳಿದ್ದೇನೆ. ಸಭೆಯಲ್ಲಿ ಏನಾಗಲಿದೆಯೋ ಕಾದು ನೋಡೋಣ. ಡಿಸಿಎಂ ಫಡ್ನವಿಸ್ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಎಂಎನ್ಎಸ್ ಕಾರ್ಯಕರ್ತರು ಪ್ರತಿ ಟೋಲ್ ಬೂತ್ ಬಳಿ ನಿಂತು ಮೂರು ಚಕ್ರದ ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಟೋಲ್ ಚಾರ್ಚ್ ತೆಗೆದುಕೊಳ್ಳದಂತೆ ಆಗುವುದನ್ನು ಖಾತ್ರಿಪಡಿಸಿಕೊಳ್ಳಲಿದ್ದಾರೆ. ಒಂದು ವೇಳೆ ನಮ್ಮ ಕಾರ್ಯಕರ್ತರನ್ನು ತಡೆದರೆ, ನಾವು ಟೋಲ್ ಗಳಿಗೆ ಬೆಂಕಿ ಹಚ್ಚಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಿವೆ, ಆದರೆ, ಮಹಾರಾಷ್ಟ್ರವನ್ನು ಟೋಲ್ ಮುಕ್ತ ಮಾಡುವ ಭರವಸೆಯನ್ನು ಯಾರೂ ಜಾರಿಗೆ ತಂದಿಲ್ಲ, ಟೋಲ್ ಬೂತ್‌ಗಳು ಅನೇಕ ರಾಜಕಾರಣಿಗಳಿಗೆ ಜೀವನಾಧಾರವಾಗಿದೆ ಎಂದು ಠಾಕ್ರೆ ಆರೋಪಿಸಿದ್ದಾರೆ.
"ಪ್ರತಿ ದಿನ, ಪ್ರತಿ ವಾರ ಮತ್ತು ಪ್ರತಿ ತಿಂಗಳು ಟೋಲ್ ಬೂತ್‌ಗಳಲ್ಲಿ ಸಂಗ್ರಹಿಸಿದ ಹಣದಿಂದ ಅವರು ಸ್ವಲ್ಪ ಪಾಲು ಪಡೆಯುತ್ತಾರೆ. ಆದ್ದರಿಂದ, ಟೋಲ್ ಬೂತ್‌ಗಳನ್ನು ಎಂದಿಗೂ ಮುಚ್ಚಲಾಗುವುದಿಲ್ಲ ಮತ್ತು ನೀವು ಎಂದಿಗೂ ಉತ್ತಮ ರಸ್ತೆಗಳನ್ನು ಪಡೆಯುವುದಿಲ್ಲ" ಎಂದು ಎಂಎನ್‌ಎಸ್ ಮುಖ್ಯಸ್ಥರು ಹೇಳಿದ್ದಾರೆ.