ಸಾಹಿಬಾಬಾದ್: 'ದೇಶದ ಮೊದಲ 'ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್' (ಆರ್‌ಆರ್‌ಟಿಎಸ್) ಯೋಜನೆಯು ಮುಂದಿನ ಒಂದೂವರೆ ವರ್ಷದೊಳಗೆ ಪೂರ್ಣಗೊಳ್ಳುವುದು. ಆ ಸಂದರ್ಭದಲ್ಲಿಯೂ ಜನರ ಸೇವೆ ಮುಂದುವರಿಸಲು ನಾನು ಇರುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಸಾಹಿಬಾಬಾದ್: 'ದೇಶದ ಮೊದಲ 'ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್' (ಆರ್‌ಆರ್‌ಟಿಎಸ್) ಯೋಜನೆಯು ಮುಂದಿನ ಒಂದೂವರೆ ವರ್ಷದೊಳಗೆ ಪೂರ್ಣಗೊಳ್ಳುವುದು. ಆ ಸಂದರ್ಭದಲ್ಲಿಯೂ ಜನರ ಸೇವೆ ಮುಂದುವರಿಸಲು ನಾನು ಇರುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
'ನಮೋ ಭಾರತ್' ರೈಲು ಎಂದು ಹೆಸರಿಸಲಾಗಿರುವ ಆರ್‌ಆರ್‌ಟಿಎಸ್‌ನ ಮೊದಲ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ನಾವು ಆರಂಭಿಸಿದ ಯೋಜನೆಗಳನ್ನು ನಾವೇ ಉದ್ಘಾಟಿಸುತ್ತೇವೆ ಎಂಬುದಾಗಿ ಈ ಹಿಂದೆ ಹಲವು ಬಾರಿ ಹೇಳಿದ್ದೆ. ಈ ದಿನವೂ ಅದೇ ಮಾತು ಹೇಳುತ್ತೇನೆ' ಎಂದರು.
'ನಾಲ್ಕು ವರ್ಷಗಳ ಹಿಂದೆ ದೆಹಲಿ-ಗಾಜಿಯಾಬಾದ್-ಮೀರಠ್ ಪ್ರಾದೇಶಿಕ ಕಾರಿಡಾರ್‌ಗೆ ನಾನು ಶಿಲಾನ್ಯಾಸ ನೆರವೇರಿಸಿದ್ದೆ. ಈ ಯೋಜನೆಯ ಮೊದಲ ಹಂತದ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಇಂದು ಚಾಲನೆ ನೀಡಿರುವೆ' ಎಂದರು.
'ಆರ್‌ಆರ್‌ಟಿಎಸ್ ಯೋಜನೆಯು ದೆಹಲಿ, ಉತ್ತರ ಪ್ರದೇಶ, ಹರಿಯಾಣ ಹಾಗೂ ರಾಜಸ್ಥಾನದ ಹಲವು ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ' ಎಂದೂ ಹೇಳಿದರು.
ದೆಹಲಿ-ಮೀರಠ್ ನಡುವಿನ 82 ಕಿ.ಮೀ. ಉದ್ದದ ಈ ಮಾರ್ಗದ ಪೈಕಿ ಮೊದಲ ಹಂತದಲ್ಲಿ ಸಾಹಿಬಾಬಾದ್-ದುಹಾಯಿ ನಡುವಿನ 17 ಕಿ.ಮೀ. ಮಾರ್ಗದಲ್ಲಿ 'ನಮೋ ಭಾರತ್' ರೈಲು ಸಂಚರಿಸಲಿದೆ.
ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇದ್ದರು.
ಉತ್ತರ ಪ್ರದೇಶದ ಸಾಹಿಬಾಬಾದ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ 'ನಮೋ ಭಾರತ್' ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಕರೊಂದಿಗೆ ಮಾತನಾಡಿದರು
ಉತ್ತರ ಪ್ರದೇಶದ ಸಾಹಿಬಾಬಾದ್‌ನಲ್ಲಿ ಶುಕ್ರವಾರ ನಡೆದ 'ನಮೋ ಭಾರತ್' ರೈಲು ಸಂಚಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತುಕತೆಯಲ್ಲಿ ತೊಡಗಿದ್ದರು