ದೋಹಾ: ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಪಡೆಗಳು ಭೂಧಾಳಿ ನಡೆಸಿದರೆ ಮಧ್ಯಪ್ರಾಚ್ಯದ ಇತರ ಕಡೆಗಳಿಗೂ ಬಿಕ್ಕಟ್ಟು ವ್ಯಾಪಿಸಬಹುದು ಎಂದು ಇರಾನ್ ಭಾನುವಾರ ಎಚ್ಚರಿಸಿದೆ.
ಇರಾನ್‌ನ ವಿದೇಶಾಂಗ ಸಚಿವ ಹುಸೇನ್ ಅಮಿರ್-ಅಬ್ದುಲ್ಲಾಹಿಯಾನ್ ಅವರು ಕತಾರ್‌ನ ಅಮೀರ್ ಶೇಖ್ ತಮೀನ್ ಬಿನ್ ಹಮದ್ ಅಲ್-ಥನಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ.
'ಈಗಿನ ಯುದ್ಧ ಹಾಗೂ ಬಿಕ್ಕಟ್ಟು ಇತರ ಕಡೆಗಳಿಗೆ ಹರಡುವುದನ್ನು ತಡೆಯುವಲ್ಲಿ ಆಸಕ್ತಿ ಇರುವವರು ಗಾಜಾದ ನಾಗರಿಕರ ಮೇಲಿನ ಈಗಿನ ಬರ್ಬರ ದಾಳಿಯನ್ನು ತಡೆಯಬೇಕು' ಎಂದು ಅವರು ಹೇಳಿದ್ದಾರೆ. ಇಸ್ರೇಲ್‌ಗೆ ಬೆಂಬಲ ಸೂಚಿಸಿರುವ ಅಮೆರಿಕದ ಕ್ರಮವನ್ನು ಕೂಡ ಅವರು ಟೀಕಿಸಿದ್ದಾರೆ.
ಇತ್ತ ಅಮೆರಿಕದ ವಾಷಿಂಗ್ಟನ್‌ನಲ್ಲಿ ಮಾತನಾಡಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲುವಾನ್ ಅವರು, ಇಸ್ರೇಲ್‌ನ ಬಹುಕಾಲದ ಶತ್ರು, ಹಮಾಸ್‌ನ ಬೆಂಬಲಿಗ ಇರಾನ್ ಈ ಯುದ್ಧದಲ್ಲಿ 'ನೇರವಾಗಿ ಭಾಗಿಯಾಗುವ' ಆತಂಕ ಇದೆ ಎಂದು ಹೇಳಿದ್ದಾರೆ. ಅಲ್ಲದೆ, ಯುದ್ಧವು ತೀವ್ರಗೊಳ್ಳಬಹುದು ಎಂಬ ಭೀತಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಅಗತ್ಯ ವಸ್ತು ಪೂರೈಸಲು ಪೋಪ್ ಕರೆ
ವ್ಯಾಟಿಕನ್ ಸಿಟಿ (ಎಎಫ್‌ಪಿ): ಗಾಜಾ ಪಟ್ಟಿ ಪ್ರದೇಶಕ್ಕೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸಲು ಅಗತ್ಯವಿರುವ ಮಾರ್ಗವನ್ನು ಮುಕ್ತವಾಗಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಕರೆ ನೀಡಿದ್ದಾರೆ.
'ಕಾನೂನಿಗೆ ಗೌರವ ನೀಡಬೇಕು. ಅಲ್ಲಿನ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಮಾರ್ಗವೊಂದನ್ನು ಮುಕ್ತವಾಗಿ ಇರಿಸುವ ತುರ್ತು ಅಗತ್ಯ ಇದೆ' ಎಂದು ಪೋಪ್ ಅವರು ಹೇಳಿದ್ದಾರೆ.
'ಮಕ್ಕಳು, ರೋಗಿಗಳು, ವೃದ್ಧರು, ಮಹಿಳೆಯರು ಹಾಗೂ ನಾಗರಿಕರು ಈ ಬಿಕ್ಕಟ್ಟಿನ ಬಲಿ ಆಗಬಾರದು ಎಂದು ನಾನು ಒತ್ತಾಯಿಸುತ್ತಿದ್ದೇನೆ' ಎಂದು ಕೂಡ ಅವರು ಹೇಳಿದ್ದಾರೆ.
ನೀರಿನ ಸಂಪರ್ಕ ಮರುಸ್ಥಾಪನೆ
ವಾಷಿಂಗ್ಟನ್ (ರಾಯಿಟರ್ಸ್): ಸಿಎನ್‌ಎನ್ ವಾಹಿನಿಗೆ ಸಂದರ್ಶನ ನೀಡಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲುವಾನ್ ಅವರು, 'ದಕ್ಷಿಣ ಗಾಜಾದಲ್ಲಿ ನೀರಿನ ಸಂಪರ್ಕವನ್ನು ಪುನರಾರಂಭಿಸಿರುವುದಾಗಿ ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ' ಎಂದು ಹೇಳಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗಸ ಸಚಿವ ವಾಂಗ್ ಯಿ ಅವರು, 'ಇಸ್ರೇಲ್ ನೀಡುತ್ತಿರುವ ಪ್ರತ್ಯುತ್ತರವು ಆತ್ಮರಕ್ಷಣೆಗೆ ಅಗತ್ಯವಿರುವ ಮಿತಿಯನ್ನು ದಾಟಿ ಹೋಗಿದೆ' ಎಂದು ಹೇಳಿದ್ದಾರೆ.
ಗಾಜಾದಲ್ಲಿನ ಜನರಿಗೆ ಸಾಮೂಹಿಕವಾಗಿ ಶಿಕ್ಷೆ ಕೊಡುವ ಕ್ರಮವನ್ನು ಕೈಬಿಡಬೇಕು ಎಂದು ಅವರು ಇಸ್ರೇಲ್ ಪ್ರಧಾನಿಯನ್ನು ಆಗ್ರಹಿಸಿದ್ದಾರೆ.