ನವದೆಹಲಿ: ಚೀನಾ ಪರ ಪ್ರಚಾರಕ್ಕಾಗಿ ದೇಣಿಗೆ ಪಡೆದ ಆರೋಪದ ಮೇಲೆ ನ್ಯೂಸ್‌ಕ್ಲಿಕ್ ಪೋರ್ಟಲ್ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ ಪತ್ರಕರ್ತ ಅಭಿಸಾರ್ ಶರ್ಮಾ ಅವರನ್ನು ಮತ್ತೆ ವಿಚಾರಣೆಗೆ ಕರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಕಠಿಣ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಸೆಲ್ ಇಂದು ಶರ್ಮಾ ಅವರನ್ನು ಮತ್ತೆ ವಿಚಾರಣೆಗೆ ಕರೆದಿದೆ.
ಮಂಗಳವಾರ ವಿಶೇಷ ಕೋಶದ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ ಅವರನ್ನು ವಿಚಾರಣೆ ನಡೆಸಲಾಗಿತ್ತು.
ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಮಂಗಳವಾರ ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಪತ್ರಕರ್ತರನ್ನು ವಿಚಾರಣೆಗೊಳಪಡಿಸಲಾಗಿದೆ.
ಇದಕ್ಕೂ ಮುನ್ನ ನ್ಯೂಸ್ ಪೋರ್ಟಲ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ(ಇಡಿ), ಅದರ ಫಂಡಿಂಗ್ ಕುರಿತು ತನಿಖೆ ಆರಂಭಿಸಿತ್ತು. ನ್ಯೂಸ್ ಪೋರ್ಟಲ್‌ಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಕೂಡ ಕೇಂದ್ರ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿತ್ತು.
ಕಳೆದ ಮಂಗಳವಾರ ನಡೆದ ದಾಳಿ ವೇಳೆ ಪೊಲೀಸರು ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಜಪ್ತಿ ಮಾಡಿದ್ದು, ಹಾರ್ಡ್ ಡಿಸ್ಕ್‌ಗಳಲ್ಲಿನ ಡೇಟಾಗಳನ್ನು ಪಡೆದುಕೊಂಡಿದ್ದಾರೆ.