ಮುಂಬೈ: ಮರಾಠ ಸಮುದಾಯಕ್ಕೆ ಮೀಸಲಾತಿ ಬೇಡಿಕೆ ವಿಷಯ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ಮೀಸಲಾತಿಗೆ ಆಗ್ರಹಿಸಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ, ಮೀಸಲಾತಿ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲರೊಬ್ಬರ ಕಾರನ್ನು ಕಿಡಿಗೇಡಿಗಳು ಗುರುವಾರ ಧ್ವಂಸ ಮಾಡಿದ್ದಾರೆ.
ಹಿಂಗೋಳಿ ಜಿಲ್ಲೆಯ ಅಖಾಡ ಬಾಲಾಪುರದಲ್ಲಿ ಕೃಷ್ಣ ಕಲ್ಯಾಣಕರ್(25) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'ತೋಟದ ಮರದಲ್ಲಿ ನೇಣು ಬಿಗಿದುಕೊಂಡು ಕೃಷ್ಣ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಮರಾಠ ಸಮುದಾಯದ ಮೀಸಲಾತಿಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಉಲ್ಲೇಖಿಸಲಾದ ಪತ್ರ ಯುವಕನ ಜೇಬಿನಲ್ಲಿ ಲಭ್ಯವಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಛತ್ರಪತಿ ಸಂಭಾಜಿನಗರದಲ್ಲಿ ಗಿರೀಶ್ ಕಾಕಾಸಾಹೇಬ್ ಕುಬೇರ್(28) ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
'ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ವಿಚಾರವಾಗಿ ಗಿರೀಶ್ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಧ್ವಂಸ: ಮರಾಠ ಸಮು ದಾಯಕ್ಕೆ ಮೀಸಲಾತಿ ನೀಡದಂತೆ ಕಾನೂನು ಹೋರಾಟ ನಡೆಸುತ್ತಿರುವ ವಕೀಲ ಗುಣರತ್ನ ಸದಾವರ್ತೆ ಅವರ ಕಾರನ್ನು ಕಿಡಿಗೇಡಿ ಗಳು ಧ್ವಂಸಗೊಳಿಸಿದ್ದಾರೆ. ಇಲ್ಲಿನ ಪರೇಲ್‌ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಎಫ್‌ಐಆರ್ ದಾಖಲಿ ಸಿರುವ ಭೋಯಿವಾಡ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.