ರಾಯಪುರ: ಛತ್ತೀಸಗಢ ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ನಡೆಸಿದ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮೊಬೈಲ್ ಫೋನ್‌ನಲ್ಲಿ ಗೇಮ್ ಆಡುತ್ತಿದ್ದರು ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬುಧವಾರ ಬಹಿರಂಗಪಡಿಸಿದೆ.
'ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರ ಪಡೆಯುವುದಿಲ್ಲ ಎಂದು ಬಘೇಲ್ ಅವರಿಗೆ ಖಾತ್ರಿ ಇರುವುದರಿಂದ ಅವರು ಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ' ಎಂದು ಬಿಜೆಪಿ ಲೇವಡಿ ಮಾಡಿದೆ.
ಛತ್ತೀಸಗಡ ವಿಧಾನಸಭೆ ಚುನಾವಣೆಯು ನವೆಂಬರ್ 7 ಮತ್ತು 17ರಂದು ನಡೆಯಲಿದೆ.
ಛತ್ತೀಸಗಢದ ರಾಜಧಾನಿ ರಾಯಪುರದಲ್ಲಿಯ ಪಕ್ಷದ ಕಚೇರಿ 'ರಾಜೀವ್ ಭವನ'ದಲ್ಲಿ ಕಾಂಗ್ರೆಸ್ ಮಂಗಳವಾರ ರಾತ್ರಿ ಸಭೆ ನಡೆಸಿತ್ತು. ಸಭೆಯ ಚಿತ್ರವೊಂದನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕುಮಾರಿ ಸೆಲ್ಜಾ, ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ದೀಪಕ್ ಬೈಜ್ ಮತ್ತಿತರ ನಾಯಕರು ಸಭೆಯಲ್ಲಿರುವುದು ಹಾಗೂ ಪಕ್ಷದ ಹಿರಿಯ ನಾಯಕರಾದ ಅಜಯ್ ಮಾಕೆನ್ ಮತ್ತು ಇತರರು ವರ್ಚುವಲ್ ಆಗಿ ಸಭೆಯಲ್ಲಿ ಪಾಲ್ಗೊಂಡಿರುವುದು ಚಿತ್ರದಲ್ಲಿ ಕಾಣುತ್ತದೆ.
'ಭೂಪೇಶ್ ಬಘೇಲ್ ಅವರು ನಿಶ್ಚಿಂತಿತರಾಗಿದ್ದಾರೆ. ಅವರು ಎಷ್ಟೇ ಪ್ರಯತ್ನಿಸಿದರೂ ಅವರ ಸರ್ಕಾರ ಪುನಃ ಆಯ್ಕೆ ಆಗುವುದಿಲ್ಲ ಎಂದು ಅವರಿಗೆ ತಿಳಿದಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ ಸಭೆ ಕಡೆಗೆ ಗಮನ ಹರಿಸುವುದಕ್ಕಿಂತ ಕ್ಯಾಂಡಿ ಕ್ರಶ್ ಆಡುವುದೇ ಸೂಕ್ತ ಎಂದು ಅವರು ಭಾವಿಸಿದಂತಿದೆ' ಎಂದು ಬರೆದಿದ್ದಾರೆ. ಈ ಪೋಸ್ಟ್‌ಅನ್ನು ಬಿಜೆಪಿ ರಾಜ್ಯ ಘಟಕ ಹಂಚಿಕೊಂಡಿದೆ.
ಬಿಜೆಪಿ ಆರೋಪಕ್ಕೆ ಬಘೇಲ್ ಪ್ರತಿಕ್ರಿಯೆ ನೀಡಿದ್ದಾರೆ. 'ಇದಕ್ಕೂ ಮೊದಲು ಬಿಜೆಪಿಯು ಭೌರ (ಬುಗುರಿ) ಮತ್ತು ಗಿಲ್ಲಿ ದಂಡ (ಚಿನ್ನಿ ದಾಂಡು) ಆಡಿದ್ದಕ್ಕೆ ಆಕ್ಷೇಪ ಎತ್ತಿತ್ತು. ಬಳಿಕ ರಾಜ್ಯದಲ್ಲಿ ಛತ್ತೀಸಗಢ ಒಲಿಂಪಿಕ್ಸ್ ಏಕೆ ಆಯೋಜಿಸಲಾಯಿತು ಎಂದು ಪ್ರಶ್ನೆ ಎತ್ತಿತ್ತು' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಾನು ಕ್ಯಾಂಡಿ ಕ್ರಶ್ ಆಡುತ್ತಿದ್ದ ಫೋಟೊ ಮಂಗಳವಾರ ಸಭೆ ನಡೆಯುವ ಮೊದಲೇ ನನಗೆ ಸಿಕ್ಕಿತ್ತು. ಬಿಜೆಪಿ ಈಗ ಆಕ್ಷೇಪಿಸಿದೆ. ಅವರಿಗೆ ನನ್ನ ಅಸ್ತಿತ್ವದ ಬಗ್ಗೆಯೇ ಆಕ್ಷೇಪ ಇದೆ. ಆದರೆ, ಯಾರು ಅಧಿಕಾರದಲ್ಲಿ ಇರಬೇಕು ಎಂಬುದನ್ನು ನಿರ್ಧರಿಸುವುದು ರಾಜ್ಯದ ಜನತೆ' ಎಂದಿದ್ದಾರೆ.
'ನಾನು ಬುಗುರಿ, ಚಿನ್ನಿ ದಾಂಡು ಆಡುವುದನ್ನು ಮುಂದುವರೆಸುತ್ತೇನೆ. ಕ್ಯಾಂಡಿ ಕ್ರಶ್ ಕೂಡಾ ನನ್ನ ಇಷ್ಟದ ಆಟ. ಯಾರನ್ನು ಆಶಿರ್ವದಿಸಬೇಕು ಎಂಬುದನ್ನು ಛತ್ತೀಸಗಢದ ಜನರು ನಿರ್ಧರಿಸುತ್ತಾರೆ' ಎಂದು ಹೇಳಿದ್ದಾರೆ.
90 ಸದಸ್ಯ ಬಲದ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಬಿಜೆಪಿ ಈಗಾಗಲೇ 85 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.