ರಾಮೇಶ್ವರಂ : 'ಚಂದ್ರಯಾನ-3'ರ ಯಶಸ್ಸಿನ ಬಳಿಕ ದೇಶದ ಬಾಹ್ಯಾಕಾಶ ಕ್ಷೇತ್ರದ ಆಯಾಮವೂ ಬದಲಾಗಿದೆ. ಅಮೆರಿಕದಲ್ಲಿ ಅಂತರಿಕ್ಷ ನೌಕೆಯ ಅಭಿವೃದ್ಧಿಯಲ್ಲಿ ತೊಡಗಿರುವ ಪರಿಣತರು ಬಾಹ್ಯಾಕಾಶ ತಂತ್ರಜ್ಞಾನ ಹಂಚಿಕೊಳ್ಳುವಂತೆ ಭಾರತಕ್ಕೆ ಕೋರಿದ್ದಾರೆ' ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
ರಾಮೇಶ್ವರಂ : 'ಚಂದ್ರಯಾನ-3'ರ ಯಶಸ್ಸಿನ ಬಳಿಕ ದೇಶದ ಬಾಹ್ಯಾಕಾಶ ಕ್ಷೇತ್ರದ ಆಯಾಮವೂ ಬದಲಾಗಿದೆ. ಅಮೆರಿಕದಲ್ಲಿ ಅಂತರಿಕ್ಷ ನೌಕೆಯ ಅಭಿವೃದ್ಧಿಯಲ್ಲಿ ತೊಡಗಿರುವ ಪರಿಣತರು ಬಾಹ್ಯಾಕಾಶ ತಂತ್ರಜ್ಞಾನ ಹಂಚಿಕೊಳ್ಳುವಂತೆ ಭಾರತಕ್ಕೆ ಕೋರಿದ್ದಾರೆ' ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಷನ್‌ನಿಂದ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಕಲಾಂ ಅವರ 92ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
'ಭಾರತವು ಪ್ರಬಲ ಶಕ್ತಿಯುತ ರಾಷ್ಟ್ರವಾಗಿದೆ. ದೇಶದ ಜ್ಞಾನ ಮತ್ತು ಬುದ್ಧಿಶಕ್ತಿಯು ಇಡೀ ವಿಶ್ವದಲ್ಲಿಯೇ ಶ್ರೇಷ್ಠ ಸ್ಥಾನ ಪಡೆದಿದೆ' ಎಂದ ಅವರು, 'ಚಂದ್ರಯಾನ-3'ರ ಗಗನನೌಕೆಯ ಉಡ್ಡಯನಕ್ಕೂ ಮೊದಲು ನಾಸಾ ವಿಜ್ಞಾನಿಗಳನ್ನು ಪರಿಶೀಲನೆಗೆ ಆಹ್ವಾನಿಸಿದಾಗ ನಡೆದ ಪ್ರಸಂಗಗಳನ್ನು ಮೆಲುಕು ಹಾಕಿದರು.
'ಜೆಟ್ ನೋದನಾ ಪ್ರಯೋಗಾಲಯದಲ್ಲಿ ರಾಕೆಟ್ ನಿರ್ಮಾಣದಲ್ಲಿ ತೊಡಗಿರುವ ನಾಸಾ-ಜೆಪಿಎಲ್‌ನ 5ರಿಂದ 6 ವಿಜ್ಞಾನಿಗಳನ್ನು ಇಸ್ರೊ ಕೇಂದ್ರ ಕಚೇರಿಗೆ ಆಹ್ವಾನಿಸಲಾಗಿತ್ತು. ಅವರಿಗೆ 'ಚಂದ್ರಯಾನ-3' ಯೋಜನೆ, ನೌಕೆಯ ವಿನ್ಯಾಸ ಕುರಿತು ವಿವರಿಸಿದೆವು. ಆಗ 'ನಾವು ಹೇಳುವುದು ಏನೂ ಇಲ್ಲ. ಎಲ್ಲವೂ ಸರಿಯಾಗಿದೆ' ಎಂದಷ್ಟೇ ಅವರು ಉತ್ತರಿಸಿದರು' ಎಂದು ಸೋಮನಾಥ್ ಹೇಳಿದರು.
'ಭಾರತದಲ್ಲಿ ತಂತ್ರಜ್ಞಾನ ಸಲಕರಣೆಗಳು ಕಡಿಮೆ ದರಕ್ಕೆ ಸಿಗುತ್ತವೆ. ಅತ್ಯಾಧುನಿಕ ತಂತ್ರಜ್ಞಾನದಡಿ ಅಭಿವೃದ್ಧಿಪಡಿಸಿರುವ ಇವುಗಳನ್ನು ಬಳಸಿ ನೌಕೆಯನ್ನೂ ಸುಲಭವಾಗಿ ಅಭಿವೃದ್ಧಿಪಡಿಸಬಹುದು. ನೀವು ಈ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದು ಹೇಗೆ? ಅಮೆರಿಕಕ್ಕೆ ಮಾರಾಟ ಮಾಡಬಾರದೇಕೆ ಎಂದು ಅವರು ಕೇಳಿದ್ದರು' ಎಂದರು.
'ಈಗ ಕಾಲಚಕ್ರ ಬದಲಾಗಿದೆ. ಭಾರತವು ಅತ್ಯುತ್ತಮ ಉಪಕರಣಗಳು ಮತ್ತು ರಾಕೆಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಶಕ್ತವಾಗಿದೆ. ಹಾಗಾಗಿಯೇ, ಪ್ರಧಾನಿ ನರೇಂದ್ರ ಮೋದಿ ಅವರು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೂ ಮುಕ್ತವಾಗಿ ತೆರೆದಿಟ್ಟಿದ್ದಾರೆ' ಎಂದರು.
'ಜೆಪಿಎಲ್' ಎಂಬುದು ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯವಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಇದನ್ನು ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು ನಿರ್ವಹಣೆ ಮಾಡುತ್ತದೆ.