ವಾಷಿಂಗ್ಟನ್: ಯುದ್ಧ ಕಾಲದಲ್ಲಿ ಬೆಂಬಲ ಸೂಚಿಸಲು ಇಸ್ರೇಲ್‌ಗೆ ತೆರಳಿದ್ದ ನೀಡಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಭೇಟಿ ಅಂತ್ಯಗೊಳಿಸಿ ದೇಶಕ್ಕೆ ಮರಳಿದ್ದಾರೆ.
ಈ ನಡುವೆ, ಇಸ್ರೇಲ್ ಮೇಲೆ ಹಮಾಸ್ ದಾಳಿ ಹಾಗೂ ರಷ್ಯಾ-ಉಕ್ರೇನ್ ಯುದ್ಧದ ಕುರಿತು ದೇಶದ ನಿಲುವನ್ನು ತಿಳಿಸಲು ಗುರುವಾರ ರಾಷ್ಟ್ರದ ಜನರನ್ನು ಉದ್ದೇಶಿಸಿ ಬೈಡನ್ ಮಾತನಾಡಲಿದ್ದಾರೆ ಎಂದು ಶ್ವೇತಭವನ ಬುಧವಾರ ತಿಳಿಸಿದೆ.
'ನಾಳೆ, ಬೈಡನ್ ಅವರು ಇಸ್ರೇಲ್ ವಿರುದ್ಧ ಹಮಾಸ್‌ನ ಭಯೋತ್ಪಾದಕ ದಾಳಿ ಮತ್ತು ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ಚರ್ಚಿಸಲು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ' ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಹೇಳಿದ್ದಾರೆ. 'ಓವಲ್ ಕಚೇರಿಯಿಂದ ಸ್ಥಳೀಯ ಸಮಯ ರಾತ್ರಿ 8:00 ಗಂಟೆಗೆ ಭಾಷಣ ಆರಂಭವಾಗಲಿದೆ' ಎಂದು ತಿಳಿಸಿದ್ದಾರೆ.
'ಮಾನವೀಯ ನೆಲೆಯಲ್ಲಿ ಅಗತ್ಯ ವಸ್ತುಗಳು ನಾಗರಿಕರಿಗೆ ಮಾತ್ರ ತಲುಪಬೇಕು. ಹಮಾಸ್ ಬಂಡುಕೋರರಿಗೆ ಸಿಗಬಾರದು ಎಂಬ ಷರತ್ತಿನ ಅಡಿಯಲ್ಲಿ ಇಸ್ರೇಲ್ ಇದಕ್ಕೆ ಒಪ್ಪಿದೆ. ಹೀಗಾಗಿ ಗಾಜಾ, ವೆಸ್ಟ್ ಬ್ಯಾಂಕ್‌ಗೆ ಹೆಚ್ಚುವರಿಯಾಗಿ 100 ಮಿಲಿಯನ್ ಡಾಲರ್ (ಅಂದಾಜು ₹832 ಕೋಟಿ) ನೆರವನ್ನು ಅಮೆರಿಕ ಒದಗಿಸಲಿದೆ ಬೈಡನ್ ತಿಳಿಸಿದ್ದಾರೆ.
ಗಾಜಾದ ಆಸ್ಪತ್ರೆಯ ಮೇಲೆ ಮಂಗಳವಾರ ನಡೆದ ದಾಳಿಗೆ ಬೇಸರ ವ್ಯಕ್ತಪಡಿಸಿದ ಅವರು, ಪ್ಯಾಲೆಸ್ಟೀನ್ ಪರ ಬಂಡುಕೋರರೇ ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪಕ್ಕೆ ದನಿಗೂಡಿಸಿದ್ದಾರೆ. ಹಾಗೆಯೇ, ಪ್ರತ್ಯೇಕ ಪ್ಯಾಲೆಸ್ಟೀನ್ ದೇಶದ ನಿರ್ಮಾಣಕ್ಕೆ ತಾವು ಬದ್ಧ ಎಂದೂ ಪುನರುಚ್ಚರಿಸಿದ್ದಾರೆ.