ಮುಳ್ಳೇರಿಯ: ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಕೆ.ಎಸ್.ಎಸ್.ಎಂ. ವ್ಯಾಪ್ತಿಯ ಬಡ್ಸ್ ಶಾಲೆಗಳ ನೌಕರರು ರಜೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಕಾರಡ್ಕ ಬಡ್ಸ್ ಶಾಲೆಗಳ ಸಾಮಾಜಿಕ ಭದ್ರತಾ ಮಿಷನ್ ನೌಕರರು ಬುಧವಾರದಿಂದ ರಜೆಯ ಮೇಲೆ ತೆರಳಿದ್ದಾರೆ. ಮುಳಿಯಾರಿನ ಬಡ್ಸ್ ಶಾಲೆಯ ನೌಕರರೂ ಮುಂದಿನ ದಿನಗಳಲ್ಲಿ ರಜೆಗಾಗಿ ಅರ್ಜಿ ಸಲ್ಲಿಸಲು ಸಜ್ಜಾಗಿದ್ದಾರೆ.
ರಜೆ ಮೇಲೆ ಹೋಗುವುದರಿಂದ ಪಂಚಾಯಿತಿಯಿಂದ ನೇಮಕಗೊಂಡ ಒಬ್ಬಿಬ್ಬರು ನೌಕರರು ಮಾತ್ರ ಇಲ್ಲೇ ಉಳಿದಿದ್ದಾರೆ. ಇದರಿಂದ ಬಡ್ಸ್ ಶಾಲೆಗಳ ಕಾರ್ಯನಿರ್ವಹಣೆ ಅತಂತ್ರ ಸ್ಥಿತಿಯಲ್ಲಿದೆ. ಮುಳಿಯಾರ್, ಕಾರಡ್ಕ, ಬೆಳ್ಳೂರು, ಎಣ್ಮಕಜೆ, ಕುಂಬ್ಡಾಜೆ, ಪೆರಿಯ, ಪನತ್ತಡಿ, ಕಳ್ಳಾರ್, ಕಯ್ಯೂರು-ಚೀಮೇನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳ 35ಕ್ಕೂ ಹೆಚ್ಚು ನೌಕರರು ವೇತನ ಪಾವತಿಯಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎಪ್ರಿಲ್‍ವರೆಗೆ ಸಂಬಳ ಪಡೆದಿದ್ದರು.
ಅಂದಿನಿಂದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ. ದಿನನಿತ್ಯದ ಖರ್ಚಿಗೂ ಕೈಯಲ್ಲಿ ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಬಡ್ಸ್ ಶಾಲೆಗಳಲ್ಲಿ ತಮ್ಮೊಂದಿಗೆ ಕೆಲಸ ಮಾಡುವ ಪಂಚಾಯತ್‍ಗಳ ನೌಕರರು ಸರಿಯಾಗಿ ವೇತನ ಪಡೆಯುತ್ತಿದ್ದಾರೆ. ಕೇರಳ ಸಾಮಾಜಿಕ ಭದ್ರತಾ ಮಿಷನ್ ಅಡಿಯಲ್ಲಿ ಆಧುನಿಕ ಮಕ್ಕಳ ಪುನರ್ವಸತಿ ಕೇಂದ್ರಗಳಲ್ಲಿರುವ ಥೆರಪಿಸ್ಟ್, ಆಯಾಗಳು, ಸೆಕ್ಯುರಿಟಿ ಮತ್ತು ಶಿಕ್ಷಕರ ಹುದ್ದೆಗಳ ನೌಕರರಿಗೆ ಸಂಬಳ ಸಿಗುತ್ತಿಲ್ಲ.
ಹಣ ನೀಡದ ಕಾರಣ ಅನೇಕರು ಕೆಲಸ ಬಿಡುವ ಸ್ಥಿತಿಯಲ್ಲೂ ಇದ್ದಾರೆ. ವೇತನ ನೀಡದ ಕಾರಣ ಕೆಲಸ ಬಿಟ್ಟಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳುವಂತಿಲ್ಲ.
ಕೋವಿಡ್ ಅವಧಿಯ ನಂತರ ಖಾಲಿ ಇರುವ ಹುದ್ದೆಗಳಿಗೆ ಯಾವುದೇ ಹೊಸ ನೇಮಕಾತಿಗಳನ್ನು ಮಾಡಲಾಗಿಲ್ಲ ಎಂದು ಹೇಳಲಾಗಿದೆ. ಇದರೊಂದಿಗೆ ಥೆರಪಿಯಂತಹ ಚಿಕಿತ್ಸೆಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡಿ ಖರೀದಿಸಿದ ಉಪಕರಣಗಳನ್ನು ಬಳಸುವವರೇ ಇಲ್ಲದಂತಾಗಿದೆ. ರಾಜ್ಯಮಟ್ಟದ ವರ್ಕಿಂಗ್ ಗ್ರೂಫ್ ಸಭೆ ನಡೆಸದ ಕಾರಣ ವೇತನ ದೊರೆಯಲು ವಿಳಂಬವಾಗುತ್ತಿದೆ ಎಂಬುದು ಅಧಿಕಾರಿಗಳು ವಿವರಣೆ ನೀಡಿರುವರು.