ಟೆಲ್ ಅವೀವ್: ಮಹತ್ವದ ಬೆಳವಣಿಗೆಯಲ್ಲಿ ಹಮಾಸ್ ಉಗ್ರ ಹುಟ್ಟಡಗಿಸಲು ಪಣತೊಟ್ಟಿ ನಿಂತಿರುವ ಇಸ್ರೇಲ್ ಸೇನೆ ಇದೀಗ ಉಗ್ರ ಸಂಘಟನೆಯ ರಾಕೆಟ್ ಲಾಂಚಿಂಗ್ ಕೇಂದ್ರದ ಮೇಲೆಯೇ ವೈಮಾನಿಕ ದಾಳಿ ಮಾಡಿ ಧ್ವಂಸ ಮಾಡಿದೆ.
ಈ ಬಗ್ಗೆ ಸ್ವತಃ ಇಸ್ರೇಲ್ ಸೇನಾಪಡೆ ಐಡಿಎಫ್ (ಇಸ್ರೇಲ್ ಢಿಫೆನ್ಸ್ ಫೋರ್ಸ್) ಮಾಹಿತಿ ನೀಡಿದ್ದು, ಹಮಾಸ್‌ಗೆ ಸೇರಿದ ಗಾಜಾ ಪಟ್ಟಿಯಲ್ಲಿರುವ ಡಜನ್‌ಗಟ್ಟಲೆ ಕಾರ್ಯಾಚರಣೆಯ ಪ್ರಧಾನ ಕಛೇರಿಗಳು ಮತ್ತು ಮಾರ್ಟರ್ ಬಾಂಬ್, ರಾಕೆಟ್ ಉಡಾವಣಾ ಸ್ಥಾನಗಳು ತನ್ನ ವೈಮಾನಿಕ ದಾಳಿಯಲ್ಲಿ ನಾಶವಾಗಿವೆ ಎಂದು ಘೋಷಣೆ ಮಾಡಿವೆ.
ಅಂತೆಯೇ ಭಯೋತ್ಪಾದಕ ಸಂಘಟನೆ ಹಮಾಸ್ ನ ನಜಾಬಾ ಫೋರ್ಸ್‌ನ ಕಮಾಂಡರ್ ಅಲಿ ಕಾಚಿಯ ಸೇನಾ ಪ್ರಧಾನ ಕಛೇರಿಯು ಕೂಡ ಈ ವೈಮಾನಿಕ ದಾಳಿಯಲ್ಲಿ ನಾಶವಾಗಿದ್ದು, ಇದೇ ಉಗ್ರ ಸಂಘಟನೆ ಕಚೇರಿ ಕಾಂಪೌಂಡ್‌ನಲ್ಲಿದ್ದ ಹಲವಾರು ಭಯೋತ್ಪಾದಕರನ್ನು ಸಹ ಕೊಲ್ಲಲಾಗಿದೆ ಇಸ್ರೇಲ್ ರಕ್ಷಣಾ ಪಡೆಗಳು ಘೋಷಿಸಿವೆ.
ಟೆಲ್ ಅವೀವ್ ಮೇಲೂ ರಾಕೆಟ್ ದಾಳಿ, ಐರನ್ ಡೋಮ್ ನಿಂದ ರಕ್ಷಣ
ಇತ್ತ ಗಾಜಾಪಟ್ಟಿಯಿಂದ ರಾಜಧಾನಿ ಟೆಲ್ ಅವೀವ್ ಮೇಲೂ ಉಗ್ರರು ಸೋಮವಾರ ರಾಕೆಟ್ ದಾಳಿ ಮಾಡಿದ್ದು, ಟೆಲ್ ಅವೀವ್ ಮತ್ತು ಜೆರುಸಲೇಂ ಮೇಲೆ ಹಾರಿದ ಮೂರು ರಾಕೆಟ್ ಗಳನ್ನು ಗುರುತಿಸಿದ ಐರನ್ ಡೋಮ್ ಆ್ಯಂಟಿ ರಾಕೆಟ್ ವ್ಯವಸ್ಥೆ ಅವುಗಳನ್ನು ಆಗಸದಲ್ಲಿಯೇ ಹೊಡೆದುರುಳಿಸಿವೆ. ಈ ವೇಳೆ ಎರಡೂ ನಗರಗಳಲ್ಲಿ ಸೈರನ್ ಹಾಕಿ ಸಾರ್ವಜನಿಕರನ್ನು ಎಚ್ಚರಿಸಲಾಗಿತ್ತು ಎಂದು ತಿಳಿದುಬಂದಿದೆ.