ಕಾಸರಗೋಡು: ಸುಮಾರು ಎರಡು ತಿಂಗಳ ಕಾಲ ದುಡಿದರೂ ವೇತನ ಕೈಸೇರದಿರುವುದರಿಂದ ಕಂಗೆಟ್ಟಿರುವ ಕೆಎಸ್ಸಾರ್ಟಿಸಿ ನೌಕರರು ಕೆಎಸ್ಸಾರ್ಟಿಸಿ ಕಾಸರಗೋಡು ಡಿಪೋ ಕ್ಲಸ್ಟರ್ ಅಧಿಕಾರಿ ಪ್ರಿಯೇಶ್ ಕುಮಾರ್ ಅವರ ಕಚೇರಿಗೆ ಮುತ್ತಿಗೆ ನಡೆಸಿ ದಿಗ್ಬಂಧನ ನಡೆಸಿದೆ. ಕೆಎಸ್‍ಟಿ ನೌಕರರ ಸಂಘ (ಬಿಎಂಎಸ್) ನೇತೃತ್ವದಲ್ಲಿ ಕೆಎಸ್‍ಆರ್‍ಟಿಸಿ ನೌಕರರು ಧರಣಿ ಆಯೋಜಿಸಿದ್ದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಂ.ಪ್ರವೀಣ್, ರಾಜ್ಯ ಕಾರ್ಯದರ್ಶಿ ಕೆ.ಮಣಿಕಂಠನ್, ಘಟಕದ ಅಧ್ಯಕ್ಷ ಸಿ.ಎಚ್.ಹರೀಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಎನ್.ಸಿ.ಟಿ.ಗೋಪಿನಾಥನ್, ಕಾಞಂಗಾಡು ಘಟಕದ ಉಪಾಧ್ಯಕ್ಷ ಎ.ರಾಜೇಶ್ ಧರಣಿಯ ನೇತೃತ್ವ ವಹಿಸಿದ್ದರು. ಕೆಎಸ್ಸಾರ್ಟಿಸಿ ನೌಕರರು ಕಳೆದ ಹಲವು ವರ್ಷಗಳಿಂದ ಸಕಾಲದಲ್ಲಿ ವೇತನ ಲಭಿಸದೆ ಸಂಕಷ್ಟ ಅನುಭವಿಸುತ್ತಿದ್ದು, ಈ ಬಾರಿ 57ದಿನ ಕಳೆದರೂ ವೇತನ ಬಿಡುಗಡೆಗೊಳಿಸದ ಹಿನ್ನೆಲೆಯಲ್ಲಿ ಕಾಸರಗೋಡು ಡಿಪೋದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ನ್ಯಾಯಯುತ ಬೇಡಿಕೆ ಈಡೇರಿಸುವಂತೆ ನೌಕರರು ಅಧಿಕಾರಿ ಎದುರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದರು. ನಂತರ ನಗರಠಾಣೆ ಪೆÇಲೀಸರು ಆಗಮಿಸಿ ಪ್ರತಿಭಟನಾನಿರತ ನೌಕರರನ್ನು ಬಂಧಿಸಿ ಕರೆದೊಯ್ದರು.